ನಾಗ್ಪುರ: ಆನ್ಲೈನ್ ಜೂಜಾಟದ ಗೀಳಿಗೆ ಬಿದಿದ್ದ ಉದ್ಯಮಿಯೋರ್ವ ಮೊದಲು 5 ಕೋಟಿ ರೂ ಗೆದ್ಜು ಅದೇ ಹುಮ್ಮಸ್ಸಿನಲ್ಲಿ ಆಟ ಮುಂದುವರೆಸಿ ಬರೊಬ್ಬರಿ 58 ಕೋಟಿ ರೂ ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.
ಮಹಾರಾಷ್ಟ್ರದ ನಾಗ್ಪುರ ಮೂಲದ ಉದ್ಯಮಿ ಪರಿಚಿತನ ಮಾತು ಕೇಳಿ ಆನ್ ಲೈನ್ ಜೂಜಾಟವಾಡಿ ಸುಮಾರು 58 ಕೋಟಿ ರೂ ಹಣವನ್ನು ಕಳೆದುಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಅವರು ನಾಗ್ಪುರ ಮೂಲದ ಉದ್ಯಮಿಯೊಬ್ಬರಿಗೆ ಆನ್ ಲೈನ್ ಜೂಜಾಟದ ಬಗ್ಗೆ ಮಾಹಿತಿಯನ್ನು ಕೊಟ್ಟು, ಅದರಲ್ಲಿ ಲಾಭದಾಯಕವಾಗಿ ಹಣವನ್ನು ಮಾಡಬಹುದೆಂದು ಹೇಳಿದ್ದಾರೆ.
ಇದಕ್ಕೆ ಮೊದಲು ಉದ್ಯಮಿ ಒಪ್ಪಿರಲಿಲ್ಲ. ಆದರೆ ನಿರಂತರವಾಗಿ ಜೈನ್ ಉದ್ಯಮಿಯ ಮನವೊಲಿಸಿದ್ದಾರೆ. ಇದರ ಜೊತೆಗೆ ಹವಾಲಾ ವ್ಯಾಪಾರಿಯ ಮೂಲಕ 8 ಲಕ್ಷ ರೂ.ವನ್ನು ಖಾತೆಗೆ ವರ್ಗಾಯಿಸಿದ್ದಾರೆ. ಮೊದಲು ಆನ್ ಲೈನ್ ಜೂಜಾಟದ ಲಿಂಕ್ ವೊಂದನ್ನು ವಾಟ್ಸಪ್ ಮೂಲಕ ಜೈನ್ ಉದ್ಯಮಿಗೆ ಕಳುಹಿಸಿದ್ದು, ಆನ್ ಲೈನ್ ಜೂಜಾಟದ ಖಾತೆಯಲ್ಲಿ 8 ಲಕ್ಷ ರೂ. ಇಟ್ಟಿರುವುದನ್ನು ನೋಡಿ, ಉದ್ಯಮಿ ಜೂಜಾಟವನ್ನು ಆರಂಭಿಸಿದ್ದಾರೆ. ಆರಂಭಿಕದಲ್ಲಿ ಉದ್ಯಮಿಗೆ ಯಶಸ್ಸು ಸಿಕ್ಕಿದ್ದು, ಅವರು ಜೂಜಾಟದ ಮೂಲಕ ಸುಮಾರು 5 ಕೋಟಿ ರೂ.ವ ಹಣ ಗಳಿಸಿದ್ದಾರೆ.
ಅದೇ ಹುಮ್ಮಸ್ಸಿನಲ್ಲಿ ಮತ್ತಷ್ಟು ಹಣ ಲಾಭ ಮಾಡುವ ಉದ್ದೇಶದಿಂದ ಆಟ ಮುಂದವೆರಿಸಿದ್ದು ಈ ವೇಳೆ ಆತನ ಲೆಕ್ಕಾಚಾರ ತಲೆಕಳೆಗಾಗಿದ್ದು, ಆತ ಒಂದಲ್ಲ.. ಎರಡಲ್ಲ.. ಬರೊಬ್ಬರಿ 58 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ತಾನು ಮೋಸ ಹೋಗುತ್ತಿದ್ದೇನೆ ಎಂದು ಶಂಕಿಸಿ ಉದ್ಯಮಿ ಜೈನ್ ಬಳಿ ತನ್ನ ಹಣವನ್ನು ವಾಪಾಸ್ ಕೇಳಿದ್ದಾರೆ. ಆದರೆ ಆತ ಹಣ ವಾಪಾಸ್ ನೀಡಲು ನಿರಾಕರಿಸಿದ್ದಾರೆ. ಈ ಸಂಬಂಧ ಉದ್ಯಮಿ ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಜೈನ್ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಘಟನೆ ಕುರಿತು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದರು.
ಇದೇ ವೇಳೆ ಪೊಲೀಸರು ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಆರೋಪಿಯ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಆರೋಪಿ ಮೊದಲೇ ಅಲ್ಲಿಂದ ಪರಾರಿಯಾಗಿದ್ದಾನೆ. ಆತ ದುಬೈಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿರುವುದಾಗಿ ವರದಿ ತಿಳಿಸಿದೆ. ದಾಳಿಯ ವೇಳೆ 14 ಕೋಟಿ ರೂ. ನಗದು ಮತ್ತು ನಾಲ್ಕು ಕೆಜಿ ಚಿನ್ನದ ಬಿಸ್ಕತ್‌ಗಳು ಸೇರಿದಂತೆ ಗಣನೀಯ ಪ್ರಮಾಣದ ಸಾಕ್ಷ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಮಿತೇಶ್ ಕುಮಾರ್ ಹೇಳಿದರು.