ನವದೆಹಲಿ: ಭಾರತೀಯ ಮೂಲದ ಹತ್ತು ವರ್ಷದ ಬಾಲಕಿಯೊಬ್ಬಳು ಈವರೆಗೂ 50 ರಾಷ್ಟ್ರಗಳಿಗೆ ಭೇಟಿ ನೀಡಿ ಎಲ್ಲರ ಗಮನ ಸೆಳೆದಿದ್ದಾಳೆ. ಅಚ್ಚರಿಯ ಸಂಗತಿ ಏನೆಂದರೆ ಆಕೆ ಒಂದೇ ಒಂದು ದಿನವೂ ಶಾಲೆಯನ್ನು ಮಿಸ್ ಮಾಡಿಲ್ಲ. ಇದೀಗ ಆಕೆಯ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಾಲಕಿಯ ಹೆಸರು ಆದಿತಿ ತ್ರಿಪಾಠಿ. ಜಾಗತಿಕ ಪ್ರವಾಸ ಮಾಡುವ ತನ್ನ ಪಾಲಕರೊಂದಿಗೆ ಈವರೆಗೂ 50 ದೇಶಗಳಿಗೆ ಆದಿತಿ ಭೇಟಿ ನೀಡಿದ್ದಾಳೆ. ದೂರದ ಪ್ರವಾಸ ಅಂದರೆ ಶಾಲೆ ಮಿಸ್ ಆಗುವುದು ಸಾಮಾನ್ಯ. ಆದರೆ, ಆದಿತಿ ವಿಚಾರದಲ್ಲಿ ಆ ರೀತಿ ಆಗಿಲ್ಲ. ಆಕೆ ಒಂದೇ ಒಂದು ದಿನ ಶಾಲೆಯನ್ನು ಮಿಸ್ ಮಾಡಿಲ್ಲ. ಇದು ಹೇಗೆ ಸಾಧ್ಯ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ.
ಯಾಹೂ ಲೈಫ್ ಯುಕೆ ಮಾಧ್ಯಮದ ಪ್ರಕಾರ ಆದಿತಿ, ದಕ್ಷಿಣ ಲಂಡನ್ನಲ್ಲಿ ತನ್ನ ತಂದೆ ದೀಪಕ್ ಮತ್ತು ತಾಯಿ ಅವಿಲಾಶರೊಂದಿಗೆ ವಾಸವಿದ್ದಾಳೆ. ತನ್ನ ಪಾಲಕರೊಂದಿಗೆ ಯೂರೋಪ್ ಖಂಡದ ಹೆಚ್ಚಿನ ರಾಷ್ಟ್ರಗಳು ಸೇರಿದಂತೆ ನೇಪಾಳ, ಸಿಂಗಾಪೂರ್ ಮತ್ತು ಥಾಯ್ಲೆಂಡ್ಗೂ ಆದಿತಿ ಭೇಟಿ ನೀಡಿದ್ದಾಳೆ.
ಪ್ರಾಪಂಚಿಕ ಜ್ಞಾನ
ಮಗಳಿಗೆ ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸುವ ದೃಷ್ಟಿಯಿಂದ ಆದಿತಿ ಪಾಲಕರು ಆಕೆಯನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ವಿಶ್ವದ ಅನುಭವವನ್ನು ಪಡೆಯಲೆಂದು ಮತ್ತು ಜಾಗತಿಕವಾಗಿ ಇರುವ ವಿವಿಧ ಸಂಸ್ಕೃತಿ, ಆಹಾರ ಮತ್ತು ಜನರನ್ನು ಅರ್ಥಮಾಡಿಕೊಳ್ಳಲೆಂದು ಪಾಲಕರು ಆದಿತಿಯನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಅದು ಕೂಡ ಒಂದು ದಿನವು ಶಾಲೆ ಮಿಸ್ಸಾಗದಂತೆ ಪ್ರವಾಸ ಪ್ಲ್ಯಾನ್ ಮಾಡುತ್ತಾರೆ.
21 ಲಕ್ಷ ರೂಪಾಯಿ
ಅದು ಹೇಗೆಂದರೆ ಶಾಲೆಯ ರಜಾ ದಿನಗಳಲ್ಲಿ ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಾರೆ. ಆದಿತಿ ಅವರ ಪಾಲಕರು ವಾರ್ಷಿಕವಾಗಿ 20000 ಪೌಂಡ್ ಅಂದರೆ, ಭಾರತೀಯ ಕರೆನ್ಸಿ ಪ್ರಕಾರ 21 ಲಕ್ಷ ರೂಪಾಯಿಯನ್ನು ಪ್ರವಾಸಕ್ಕೆ ವ್ಯಯಿಸುತ್ತಿದ್ದಾರೆ. ತಮ್ಮ ಪ್ರವಾಸವು ತಾವು ಖರ್ಚು ಮಾಡಿರುವ ಪ್ರತಿಯೊಂದು ಹಣಕ್ಕೂ ನ್ಯಾಯ ಒದಗಿಸಿದೆ ಎಂದು ಆದಿತಿ ಪಾಲಕರು ಹೇಳಿದ್ದಾರೆ.
ಪ್ರವಾಸಕ್ಕಾಗಿ ಹಣ ಉಳಿತಾಯ
ಆದಿತಿ 3ನೇ ವಯಸ್ಸಿನಲ್ಲಿ ನರ್ಸರಿ ಓದುತ್ತಿರುವಾಗಲೇ ಪ್ರವಾಸ ಆರಂಭಿಸಿದೆವು ಎಂದು ಆಕೆಯ ತಂದೆ ಹೇಳಿದ್ದಾರೆ. ಆದಿತಿಯ ಪಾಲಕರು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಸಕ್ಕೆಂದು ಕೊಂಚ ಹಣವನ್ನು ಯಾವಾಗಲೂ ಉಳಿಸುತ್ತಿರುತ್ತಾರೆ. ಹೊರಗಡೆ ತಿನ್ನುವುದನ್ನು ತಪ್ಪಿಸುತ್ತಾರೆ ಮತ್ತು ಅವರ ಬಳಿ ಕಾರು ಇಲ್ಲದಿದರುವುದರಿಂದ ಸಾರ್ವಜನಿಕ ಸಾರಿಗೆಯನ್ನು ಆಧರಿಸಿದ್ದಾರೆ. ಆದಿತಿಯ ಎರಡು ವರ್ಷದ ಸಹೋದರಿ ಅದ್ವಿತಾಳ ಚೈಲ್ಡ್ಕೇರ್ ವೆಚ್ಚವನ್ನು ಉಳಿಸಲು ವರ್ಕ್ಫ್ರಮ್ ಹೋಮ್ ಮಾಡುತ್ತಾರೆ.
ಕೋವಿಡ್ಗೂ ಮುನ್ನ ಒಂದೇ ವರ್ಷದಲ್ಲಿ 12 ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಯೂರೋಪ್ನ ಬಹುತೇಕ ಪ್ರದೇಶಗಳಿಗೆ ಆದಿತಿ ಭೇಟಿ ನೀಡಿದ್ದಾಳೆ. ತನಗೆ ಇಷ್ಟವಾಗುವಂತಹ ಯಾವುದೇ ನಿರ್ದಿಷ್ಟ ಸ್ಥಳವಿಲ್ಲ. ಎಲ್ಲವೂ ಕೂಡ ತುಂಬಾ ಇಷ್ಟ. ಒಂದು ವೇಳೆ ಯಾವುದಾದರೂ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದರೆ, ನೇಪಾಳ, ಗಾರ್ಜಿಯಾ ಹಾಗೂ ಅರ್ಮೇನಿಯಾ ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಆದಿತಿ ಹೇಳಿದ್ದಾಳೆ.
ನೇಪಾಳದ ಮೇಲೆ ಹೆಚ್ಚು ಒಲವು
ಎಲ್ಲದಕ್ಕಿಂತ ಹೆಚ್ಚಾಗಿ ನೇಪಾಳದ ಮೇಲೆ ಆದಿತಿಗೆ ತುಸು ಹೆಚ್ಚು ಒಳವಿದೆ. ಅಲ್ಲಿ ಆಕೆ ಕುದುರೆ ಸವಾರಿ, ಅತಿ ಉದ್ದದ ಕೇಬಲ್ ಕಾರು ಸವಾರಿ ಮತ್ತು ಜಗತ್ತಿನ ಅತ್ಯಂತ ಎತ್ತರ ಶಿಖರ ಮೌಂಟ್ ಎವೆರೆಸ್ಟ್ ನೋಡಿ ಫಿದಾ ಆಗಿದ್ದಾರೆ. ವಿಶ್ವ ಪ್ರವಾಸದ ಉದ್ದಕ್ಕೂ ಹಲವು ಸುಂದರ ಹಾಗೂ ಮೋಜಿನ ಕ್ಷಣಗಳನ್ನು ಕಳೆದಿದ್ದೇನೆ ಮತ್ತು ಬೇರೆ ಮಕ್ಕಳಿಗೂ ನಾನು ಪ್ರವಾಸವನ್ನು ಶಿಫಾರಸು ಮಾಡುತ್ತೇನೆ. ಏಕೆಂದರೆ, ಪ್ರವಾಸವು ಸಾಮಾಜಿಕ ಕೌಶಲ್ಯವನ್ನು ಹೆಚ್ಚಿಸುತ್ತದೆ ಎಂದು ಆದಿತಿ ಹೇಳಿದ್ದಾಳೆ.
ಅಂದಹಾಗೆ ಆದಿತಿಯ ಮೊದಲ ಪ್ರವಾಸ ಜರ್ಮನಿ. ಕೇವಲ 3ನೇ ವಯಸ್ಸಿನಲ್ಲಿ ಜರ್ಮನಿ ಪ್ರವಾಸ ಮಾಡಿದ್ದಾಳೆ. ಮೊದಲ ಪ್ರವಾಸದಿಂದ ತುಂಬಾ ಸಂತೋಷಗೊಂಡ ಆದಿತಿ, ಬಹುಬೇಗನೆ ಫ್ರಾನ್ಸ್, ಇಟಲಿ ಮತ್ತು ಆಸ್ಟ್ರಿಯಾ ದೇಶಕ್ಕೂ ಭೇಟಿ ನೀಡಿದ್ದಾಳೆ.