ಪತ್ತನಂತಿಟ್ಟ: ಎಐ ಕ್ಯಾಮರಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಹಾಕಿಕೊಂಡು ನೋಂದಣಿ ಸಂಖ್ಯೆಯನ್ನು ಮರೆಮಾಚಿದ್ದಕ್ಕೆ ದ್ವಿಚಕ್ರ ವಾಹನ ಸವಾರನಿಗೆ ದಂಡ ವಿಧಿಸಲಾಗಿದೆ.
ತಿರುವಲ್ಲಾದಲ್ಲಿ ಈ ಘಟನೆ ನಡೆದಿದೆ. ಮೋಟಾರು ವಾಹನ ಇಲಾಖೆ ಮುಂಭಾಗ ಮತ್ತು ಹಿಂಭಾಗದ ನೋಂದಣಿ ಸಂಖ್ಯೆಗಳನ್ನು ಮುಚ್ಚಿ ಮರೆಮಾಡಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದೆ. ಇನ್ನೊಂದು ವಾಹನದ ಮೇಲೆ ಸ್ಪಷ್ಟತೆ ಇಲ್ಲದೇ ನಂಬರ್ ಪ್ಲೇಟ್ ಪ್ರದರ್ಶಿಸಿ ಅದರ ಸ್ವರೂಪ ಬದಲಿಸಿದ್ದಕ್ಕಾಗಿ ಇದೇ ರೀತಿಯ ಪ್ರಕರಣ ದಾಖಲಿಸಲಾಗಿದೆ. ವಾಹನವು ಕುನ್ನಂತಾನಂನ ವಿದ್ಯಾರ್ಥಿಗಳದ್ದಾಗಿತ್ತು.
ಎಐ ಕ್ಯಾಮರಾದಿಂದ ತಪ್ಪಿಸಿಕೊಳ್ಳಲು ನೋಂದಣಿ ಸಂಖ್ಯೆಯನ್ನು ಮರೆಮಾಚಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಎರಡು ವಾಹನಗಳಿಗೆ 20 ಸಾವಿರಕ್ಕೂ ಹೆಚ್ಚು ದಂಡ ವಿಧಿಸಿ ಪರವಾನಗಿ ಅಮಾನತಿಗೆ ಶಿಫಾರಸು ಮಾಡಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ಈ ವಾಹನಗಳು ಇತರ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿವೆಯೇ ಎಂದು ಪರಿಶೀಲಿಸಲು ಪೋಲೀಸ್ ಮತ್ತು ಅಬಕಾರಿ ಇಲಾಖೆಗಳಿಗೆ ಮಾಹಿತಿಯನ್ನು ರವಾನಿಸಲಾಗುತ್ತದೆ.
ಕ್ಯಾಮರಾ ಕಣ್ಣಿಗೆ ಬಿದ್ದರೆ 500 ರೂಪಾಯಿ ದಂಡ ತೆರಬೇಕಾದ ಹಿನ್ನೆಲೆ ತಪ್ಪಿಸಲು ವಿದ್ಯಾರ್ಥಿಗಳು ಕುಕೃತ್ಯ ಎಸಗಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಜಾರಿ ಇಲಾಖೆ ಸುಮಾರು 100 ಬೈಕ್ ಗಳನ್ನು ವಶಪಡಿಸಿಕೊಂಡು 3.5 ಲಕ್ಷ ದಂಡ ವಸೂಲಿ ಮಾಡಿದೆ.