ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ನಾಯಕ ಅಜಿತ್ ಪವಾರ್ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು ಏಕನಾಥ ಶಿಂಧೆ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಮಹಾರಾಷ್ಟ್ರ ಸರ್ಕಾರವನ್ನು ಬೆಂಬಲಿಸುವ ವಿವಿಧ ಪಕ್ಷಗಳ ಶಾಸಕರ ಸಂಖ್ಯೆ ಈಗ 200ಕ್ಕೆ ಹೆಚ್ಚಾಗಿದೆ. ಈ ಮೂಲಕ 51 ವರ್ಷಗಳ ನಂತರ ಮೊದಲ ಬಾರಿಗೆ ಒಂದು ವಿಶಿಷ್ಟ ಸನ್ನಿವೇಶ ಸೃಷ್ಟಿಯಾಗಿದೆ.
ಈ ಹಿಂದೆ 1972 ರಲ್ಲಿ 200ಕ್ಕೂ ಹೆಚ್ಚು ಶಾಸಕರು ರಾಜ್ಯ ಸರ್ಕಾರದ ಭಾಗವಾಗಿದ್ದರು. ಆದರೆ ಆ ಸಮಯದಲ್ಲಿ ಎಲ್ಲಾ 222 ಶಾಸಕರು ಒಂದೇ ಪಕ್ಷ ಕಾಂಗ್ರೆಸ್ ಗೆ ಸೇರಿದವರಾಗಿದ್ದರು. ಅಲ್ಲದೆ, ಆ ಸಮಯದಲ್ಲಿ ಸದನದ ಬಲ 270 ಆಗಿತ್ತು ಎಂದು ರಾಜ್ಯ ಶಾಸಕಾಂಗದ ಮಾಜಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆ ನಿಖರವಾಗಿ ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ, ಅಜಿತ್ ಪವಾರ್ ಅವರ ನಿಷ್ಠಾವಂತ ಮತ್ತು ಎಂಎಲ್‌ಸಿ ಅಮೋಲ್ ಮಿಟ್ಕರಿ ಅವರು, ತಮಗೆ 36(53 ರಲ್ಲಿ) ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸಿದ್ದಾರೆ.
"ಹೆಚ್ಚಿನ ಶಾಸಕರು ಅಜಿತ್ ಪವಾರ್‌ಗೆ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ. ನಾವು ಇನ್ನೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಭಾಗವಾಗಿದ್ದೇವೆ. ನಾವು ಪಕ್ಷಾಂತರ ಮಾಡಿಲ್ಲ ಎಂದು ಮಿಟ್ಕರಿ ಹೇಳಿದ್ದಾರೆ.
36 ಶಾಸಕರ ಬೆಂಬಲದ ಬಗ್ಗೆ ಮಿಟ್ಕರಿ ಅವರ ಹೇಳಿಕೆಯನ್ನೇ ಪರಿಗಣಿಸುವುದಾದರೆ ಶಿವಸೇನೆ ಮತ್ತು ಬಿಜೆಪಿ ಸೇರಿದಂತೆ ರಾಜ್ಯ ಸರ್ಕಾರವನ್ನು ಬೆಂಬಲಿಸುವ ಒಟ್ಟು ಶಾಸಕರ ಸಂಖ್ಯೆ 181ಕ್ಕೆ ಏರಿಕೆಯಾಗುತ್ತದೆ.
288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಶಾಸಕರನ್ನು ಹೊಂದಿದೆ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 40, ಬಹುಜನ ವಿಕಾಸ್ ಅಘಾಡಿಯ ಮೂವರು ಶಾಸಕರು, ಪ್ರಹಾರ್ ಜನಶಕ್ತಿ ಪಕ್ಷದ ಇಬ್ಬರು, 13 ಪಕ್ಷೇತರರು ಮತ್ತು ರಾಷ್ಟ್ರೀಯ ಸಮಾಜ ಪಕ್ಷ ಹಾಗೂ ಜನ ಸುರಾಜ್ಯ ಶಕ್ರಿ ಪಕ್ಷದ ತಲಾ ಒಬ್ಬರು ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ಒಟ್ಟಾರೆಯಾಗಿ, ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಬೆಂಬಲಿಸುವ ಶಾಸಕರ ಸಂಖ್ಯೆ 201 ರಷ್ಟಿದೆ.