ಈ ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಮಂದಿ ಆರೋಗ್ಯಯುತವಾದ ಆಹಾರಗಳನ್ನು ಬಿಟ್ಟು ಅನಾರೋಗ್ಯಯುತವಾದ ಆಹಾರಗಳನ್ನು ಸೇವಿಸೋದಕ್ಕೆ ಶುರು ಮಾಡಿದ್ದಾರೆ. ಹೊರಗಿನ ಜಂಕ್ ಫುಡ್ ಗಳು ಹಾಗೂ ಎಣ್ಣೆ ಪದಾರ್ಥಗಳನ್ನೇ ಹೆಚ್ಚಾಗಿ ಸೇವಿಸ್ತಿರೋದ್ರಿಂದ ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತೆ. ಇದ್ರ ಜೊತೆಗೆ ಬೊಜ್ಜಿನ ಸಮಸ್ಯೆ ಕೂಡ ಶುರುವಾಗುತ್ತೆ. ಒಂದು ಸಾರಿ ದೇಹದಲ್ಲಿ ಅನುಪಯುಕ್ತ ಒಬ್ಬು ಸೇರಿಕೊಂಡ್ರೆ ಅದನ್ನು ಕರಗಿಸುವುದು ತುಂಬಾನೇ ಕಷ್ಟ.
ಈ ಬೊಜ್ಜನ್ನು ಕರಗಿಸೋದಕ್ಕೆ ದೇಹವನ್ನು ಸರಿಯಾಗಿ ದಂಡಿಸೋದು ಮಾತ್ರವಲ್ಲದೇ ಇದ್ರ ಜೊತೆಗೆ ಆಹಾರದಲ್ಲೂ ಪತ್ಯ ಮಾಡ್ಬೇಕು. ಅಂದ್ರೆ ಡಯೇಟ್ ಆಹಾರಗಳನ್ನು ಮಾತ್ರ ಸೇವನೆ ಮಾಡ್ಬೇಕು. ಇನ್ನೂ ಟೀ, ಕಾಫಿಯನ್ನು ಹೆಚ್ಚಾಗಿ ಕುಡಿಬಾರದು. ಆದರೆ ಈ ಐದು ರೀತಿಯ ಟೀಗಳು ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡೋದಕ್ಕೆ ತುಂಬಾನೇ ಸಹಾಯ ಮಾಡುತ್ವೆ. ಹಾಗಾದ್ರೆ ಯಾವ ರೀತಿ ಟೀ ಗಳು ದೇಹದ ಬೊಜ್ಜು ಕರಗಿಸೋದಕ್ಕೆ ಸಹಾಯ ಮಾಡುತ್ತೆ ಅನ್ನೋದನ್ನು ತಿಳಿಯೋಣ.1. ಗ್ರೀನ್ ಟೀ
ಸಾಮಾನ್ಯವಾಗಿ ಡಯೇಟ್ ಮಾಡೋರು ಗ್ರೀನ್ ಟೀ ಕುಡಿಯೋದನ್ನು ನಾವು ಗಮನಿಸಿರ್ತೀವಿ. ಫ್ಯಾಟ್ ಲಾಸ್ ಮಾಡ್ಕೊಬೇಕು ಅನ್ನೋರಿಗೆ ಗ್ರೀನ್ ಟೀ ತುಂಬಾನೇ ಉಪಯೋಗಕಾರಿಯಾಗಿದೆ. ಕ್ಯಾಟೆಚಿನ್ ಅಂಶಗಳಿಂದ ತುಂಬಿದ ಈ ಚಹಾವು ಫಿಟ್‌ನೆಸ್ ಉತ್ಸಾಹಿಗಳಿಗೆ ತುಂಬಾನೇ ಒಳ್ಳೆಯದು.
ಏಕೆಂದರೆ ಇದು ದೇಹದ ಚಯಾಪಚಯವನ್ನು ಹೆಚ್ಚಿಸುವು ಮಾತ್ರವಲ್ಲದೇ, ನಮ್ಮ ದೇಹದಲ್ಲಿರುವ ಕೊಬ್ಬಿನ ಅಂಗಾಂಶಗಳನ್ನು ಸುಡಲು ಸಹಾಯ ಮಾಡುತ್ತದೆ. ಇದು ಕೊಬ್ಬಿನ ಕೋಶಗಳಿಂದ ಕೊಬ್ಬನ್ನು ಬಿಡುಗಡೆ ಮಾಡೋದಕ್ಕೆ, ವಿಶೇಷವಾಗಿ ಹೊಟ್ಟೆ ಪ್ರದೇಶದಲ್ಲಿ ಕೊಬ್ಬಿನ ಬಿಡುಗಡೆಗೆ ಕಾರಣವಾಗುತ್ತದೆ.
2. ವೈಟ್ ಟೀ
ಬೇರೆ ಟೀ ಗಳಿಗೆ ಹೋಲಿಸಿದ್ರೆ ವೈಟ್ ಟೀ ತುಂಬಾನೇ ದುಬಾರಿಯಾಗಿದೆ. ನಿತ್ಯ ವೈಟ್ ಟೀ ಕುಡಿಯೋದ್ರಿಂದ ಏನು ಲಾಭ ಅಂದ್ರೆ ಇದು ಹೊಸ ಕೊಬ್ಬಿನ ಕೋಶಗಳನ್ನು ರೂಪಿಸುವುದನ್ನು ತಡೆಯುತ್ತದೆ. ಶಕ್ತಿಯನ್ನು ಉತ್ಪಾದಿಸಲು ಬಿಡುಗಡೆಯಾದ ಕೊಬ್ಬನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ.
ಇದು ಸೂರ್ಯನ ಕಿರಣದಿಂದ ನಮ್ಮ ಚರ್ಮವನ್ನು ರಕ್ಷಿಸೋದಕ್ಕೆ ಸಹಾಯ ಮಾಡುತ್ತದೆ. ಹಾಗೂ ನಮ್ಮ ಮುಖದಲ್ಲಿ ವಯಸ್ಸಾದ ಲಕ್ಷಣಗಳು ಬಾರದಂತೆ ತಡೆಯುತ್ತದೆ. ಮತ್ತು ಕೋಶಗಳ ಒಡೆಯುವಿಕೆಗೆ ಕಾರಣವಾಗುತ್ತದೆ.
3. ಬ್ಲಾಕ್ ಟೀ
ಬ್ಲಾಕ್ ಟೀ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಅಧ್ಯಯನದ ಪ್ರಕಾರ ಪ್ರತಿದಿನ ಒಂದು ಕಪ್ ಕಪ್ಪು ಚಹಾವನ್ನು ಕುಡಿಯುವುದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ಮತ್ತು ರಕ್ತದ ಹರಿವು ಮತ್ತು ರಕ್ತನಾಳಗಳ ಹಿಗ್ಗುವಿಕೆಯನ್ನು ಸುಧಾರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇನ್ನೂ ಬ್ಲಾಕ್ ಟೀ ಗೆ ಹಾಲು ಸೇರಿಸುವುದರಿಂದ ಈ ಪ್ರಯೋಜನಗಳು ಸಿಗೋದಿಲ್ಲ.
4. ಓಲಾಂಗ್ ಟೀ
ಊಲಾಂಗ್ ಚಹಾದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರ್ಲಿಕ್ಕಿಲ್ಲ. ಈ ಊಲಾಂಗ್ ಚಹಾವು ಚೈನೀಸ್ ಗಿಡಮೂಲಿಕೆಯ ಚಹಾವಾಗಿದ್ದು, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಊಲಾಂಗ್ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ವ್ಯಕ್ತಿಯ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಇದು ಹಸಿವನ್ನು ನಿಯಂತ್ರಸುವ ಶಕ್ತಿಯನ್ನು ಹೊಂದಿದೆ. ಜೊತೆಗೆ ಸ್ಥೂಲಕಾಯತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
5. ಅಶ್ವಗಂಧ ಟೀ
ಅಶ್ವಗಂಧ ಒಂದು ರೀತಿಯ ಗಿಡಮೂಲಿಕೆ. ಆಯೂರ್ವೇದದಲ್ಲಿ ಇದಕ್ಕೆ ಮಹತ್ವವಾದ ಸ್ಥಾನವಿದೆ. ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದಾದ ಅಶ್ವಗಂಧ ಚಹಾವು ಒತ್ತಡ, ಆತಂಕವನ್ನು ನಿವಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಚಹಾವು ನಿದ್ರೆಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರಿಗೆ ರಾತ್ರಿ ಸಮಯದಲ್ಲಿ ಶಾಂತವಾಗಿ ನಿದ್ರಿಸಲು ನೆರವಾಗುತ್ತದೆ.
ಟೀ ಅಂದ್ರೆ ಹೆಚ್ಚಿನವರಿಗೆ ಪಂಚ ಪ್ರಾಣ. ಯಾವಾಗ ಟೀ ಕೊಟ್ರು ಕುಡಿಯುತ್ತಾರೆ. ಆದರೆ ಅತಿಯಾಗಿ ಟೀ ಕುಡಿಯೋದು ಒಳ್ಳೆಯದಲ್ಲ. ಆದರೆ ಈ ಮೇಲಿನ ಟೀ ಗಳನ್ನು ನಿತ್ಯವು ಒಂದು ಬಾರಿ ಕುಡಿಯೋದ್ರಿಂದ ನಿಮ್ಮ ಬೊಜ್ಜು ಕರಗೋದಕ್ಕೆ ಸಹಾಯ ಮಾಡುವುದಲ್ಲದೇ ದೇಹವನ್ನು ಒಂದು ಆಕಾರಕ್ಕೆ ತರಲು ಸಾಧ್ಯವಾಗುತ್ತದೆ. ಆದರೆ ಇದರ ಜೊತೆಗೆ ವ್ಯಾಯಾಮ ಮಾಡಿ ಹಾಗೂ ಡಯೇಟ್ ಫುಡ್ ತಿನ್ನೋದನ್ನು ಮರೀಬೇಡಿ. ಆಗ ಮಾತ್ರ ಬೊಜ್ಜು ಕರಗೋದಕ್ಕೆ ಸಾಧ್ಯ.