ಫರಿದಾಬಾದ್: ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯೊಬ್ಬಳು 60 ಅಡಿ ಎತ್ತರದ ವಿದ್ಯುತ್ ಕಂಬವನ್ನು ಏರಿದ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ.
ಮಹಿಳೆಯನ್ನು ಮೆಹಕ್ ಎಂದು ಗುರುತಿಸಲಾಗಿದ್ದು, ಸೋಮವಾರ ಮುಂಜಾನೆ 5.30ರ ಸುಮಾರಿಗೆ ಸೆಕ್ಟರ್ 29ರ ಬಳಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಸ್ಥಳದಲ್ಲಿ ವಿದ್ಯುತ್ ಕಂಬವನ್ನು ಏರಿದ್ದಾಳೆ.
ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಕೆಗೆ ಕೆಳಗಿಳಿಯುವಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಮನವಿ ಮಾಡಿದರು. ಆದರೆ ಮಹಿಳೆ ತನ್ನ ಪತಿ ಮತ್ತು ಮಗ ನಿರಪರಾಧಿ, ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಎಫ್‌ಐಆರ್‌ನಿಂದ ಅವರ ಹೆಸರನ್ನು ತೆಗೆದುಹಾಕಿದರೆ ಮಾತ್ರ ಕೆಳಗೆ ಬರುವುದಾಗಿ ಹೇಳಿದ್ದಾಳೆ. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕಂಬ ಹತ್ತಿ, ಮಹಿಳೆಯನ್ನು ರಕ್ಷಿಸಿ ವೈದ್ಯಕೀಯ ಪರೀಕ್ಷೆಯ ನಂತರ ಮನೆಗೆ ಕಳುಹಿಸಿದ್ದಾರೆ.
ಘಟನೆ ಹಿನ್ನೆಲೆ:
ಮೇ 21ರಂದು ಮಾಜಿ ನಾಮನಿರ್ದೇಶಿತ ಕೌನ್ಸಿಲರ್ ಬಿಜೇಂದರ್ ಶರ್ಮಾರ ಸಹೋದರರನ್ನು ಥಳಿಸಿದ್ದಕ್ಕಾಗಿ ಸತ್ವೀರ್ ಭಾಟಿ, ಆತನ ಪುತ್ರರು ಮತ್ತು ಇತರರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿತ್ತು. ಪೊಲೀಸರು ಅಭಯ್, ಲೋಕೇಶ್ ಅಲಿಯಾಸ್ ಲೌಕಿ, ರಾಕೇಶ್ ಅಲಿಯಾಸ್ ಲುಕ್ಕಿ ಮತ್ತು ಲೋಕೇಶ್ ಎಂಬುವವರನ್ನು ಬಂಧಿಸಿದ್ದರು.
ಆದರೆ ಪೊಲೀಸರು ಪ್ರಮುಖ ಆರೋಪಿ ಸತ್ವೀರ್ ಭಾಟಿ ಮತ್ತು ಆತನ ಪುತ್ರರನ್ನು ಬಂಧಿಸಿಲ್ಲ ಎಂದು ಬಿಜೇಂದರ್ ಶರ್ಮಾ ಮತ್ತು ಆತನ ಕುಟುಂಬದವರು ಆರೋಪಿಸಿ, ಅವರನ್ನು ಬಂಧಿಸುವಂತೆ ಒತ್ತಾಯಿಸಿ ಶರ್ಮಾ ಮತ್ತು ಕುಟುಂಬಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು.