ನವದೆಹಲಿ: ಹಿಮಾಲಯದ ಶಿಲಾಪದರುಗಳಲ್ಲಿ 60 ಕೋಟಿ ವರ್ಷಗಳಷ್ಟು ಹಿಂದಿನ ಸಮುದ್ರದ ನೀರನ್ನು ಬೆಂಗಳೂರು ಮೂಲದ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.
ಈ ಸಂಶೋಧನೆಯು ಭೂಮಿಯ ಮೇಲೆ ಜೀವರಾಶಿಗಳ ಉಗಮದಂತಹ ಸಂಕೀರ್ಣ ವಿಷಯದ ಮೇಲೆ ಹೊಸ ಸುಳಿವುಗಳನ್ನು ನೀಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ಭೂವಿಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ಸಜೀವ್ ಕೃಷ್ಣನ್ ನೇತೃತ್ವದ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, 'ಪ್ರಿಕ್ಯಾಂಬ್ರಿಯನ್ ರಿಸರ್ಚ್' ಎಂಬ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ.
ಹಿಮಾಲಯದ ಖನಿಜಗಳಲ್ಲಿ ನೀರಿನ ಹನಿಗಳಿರುವುದನ್ನು ಕೂಡ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಭೂಮಿ ಮೇಲೆ ಜೀವರಾಶಿ ವಿಕಾಸಗೊಂಡಿದ್ದ ಆರಂಭಿಕ ಅವಧಿಯಲ್ಲಿ ಅಗತ್ಯದಷ್ಟು ಪ್ರಮಾಣದ ಆಮ್ಲಜನಕ ಹೇಗೆ ಉತ್ಪತ್ತಿಯಾಗಿತ್ತು ಎಂಬ ಪ್ರಶ್ನೆಗೆ ಈ ಸಂಶೋಧನೆಯಿಂದ ಪರಿಹಾರ ದೊರೆತಿದೆ ಎಂದು ಸಂಶೋಧಕರು ಹೇಳಿದ್ದಾರೆ.
'60 ಕೋಟಿ ವರ್ಷಗಳಷ್ಟು ಕಡಲ ನೀರು ಈವರೆಗೆ ಪತ್ತೆಯಾಗಿರಲಿಲ್ಲ. ನೀರಿನ ಹನಿಗಳಿದ್ದ ಖನಿಜಗಳನ್ನು ಹೊಂದಿದ್ದ ಶಿಲೆಗಳ ಯುಗವನ್ನು ಪತ್ತೆ ಮಾಡುವ ಮೂಲಕ ನೀರು ರೂಪುಗೊಂಡ ಕಾಲಾವಧಿಯನ್ನು ನಿರ್ಧರಿಸಿದ್ದೇವೆ' ಎಂದು ಸಜೀವ್ ಕೃಷ್ಣನ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
'ಹಿಮಾಲಯದ ಶಿಲಾಪದರುಗಳಲ್ಲಿ ಪತ್ತೆಯಾಗಿರುವ ನೀರಿನ ಹನಿಗಳನ್ನು ಪ್ರಸ್ತುತ ಕಡಲ ನೀರಿನೊಂದಿಗೆ ಹೋಲಿಕೆಯಾಗುವುದನ್ನು ಕೂಡ ನಮ್ಮ ಅಧ್ಯಯನ ದೃಢಪಡಿಸಿದೆ' ಎಂದು ಹೇಳಿದ್ದಾರೆ.
'ಕೆಲ ನಿರ್ದಿಷ್ಟ ಬಗೆಯ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಗೆ ಆಗಿನ ವಾತಾವರಣ ಪೂರಕವಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಅಗತ್ಯವಿಲ್ಲದಿದ್ದರೂ ಈ ಸೂಕ್ಷ್ಮಾಣುಜೀವಿಗಳು ವಾತಾವರಣಕ್ಕೆ ಅಪಾರ ಪ್ರಮಾಣದ ಆಮ್ಲಜನಕ ಬಿಡುಗಡೆ ಮಾಡುತ್ತಿದ್ದವು ಎಂಬುದು ತಿಳಿದು ಬಂತು' ಎಂದು ತಂಡದಲ್ಲಿದ್ದ, ಐಐಎಸ್‌ಸಿಯ ಮತ್ತೊಬ್ಬ ವಿಜ್ಞಾನಿ ಪ್ರಕಾಶಚಂದ್ರ ಆರ್ಯ ತಿಳಿಸಿದ್ದಾರೆ.
ಭೂಗೋಳವಿಜ್ಞಾನದ ಈ ರಹಸ್ಯಗಳನ್ನು ಬಿಚ್ಚಿಡುವ ಸಲುವಾಗಿ ಹಿಮಾಲಯದ ಪಶ್ಚಿಮ ಭಾಗದಲ್ಲಿ ವಿಜ್ಞಾನಿಗಳ ತಂಡ ಮೂರು ತಿಂಗಳ ಕಾಲ ಕ್ಷೇತ್ರ ಅಧ್ಯಯನ ಕೈಗೊಂಡಿತ್ತು. ರಾಸಾಯನಿಕವಾಗಿ ಮೂಲರೂಪದಲ್ಲಿರುವ ಖನಿಜಗಳನ್ನು ಸಂಗ್ರಹಿಸಿದ್ದ ತಂಡ, ಪ್ರಯೋಗಾಲಯದಲ್ಲಿ ಕೂಲಂಕಷ ಅಧ್ಯಯನಕ್ಕೆ ಒಳಪಡಿಸಿತ್ತು.