ತಿರುವನಂತಪುರಂ: ಮಹತ್ವಾಕಾಂಕ್ಷೆಯ `6,500 ಕೋಟಿ ವೆಚ್ಚದ ಕರಾವಳಿ ಹೆದ್ದಾರಿ ಯೋಜನೆಯ ಅನುಷ್ಠಾನ ವೇಗ ಪಡೆಯುತ್ತಿದ್ದು, ಸ್ಥಳಾಂತರ ಮತ್ತು ಜೀವನೋಪಾಯದ ನಷ್ಟದ ಭೀತಿಯಲ್ಲಿರುವ ಮೀನುಗಾರರಲ್ಲಿ ಆತಂಕ ಮತ್ತು ಪ್ರತಿಭಟನೆಗಳು ಹುಟ್ಟಿಕೊಂಡಿವೆ. 623 ಕಿಮೀ ಉದ್ದದ ಯೋಜನೆಯು ಕರಾವಳಿಯ ಒಂಬತ್ತು ಜಿಲ್ಲೆಗಳಲ್ಲಿ ಹಾದುಹೋಗುತ್ತದೆ. ತಿರುವನಂತಪುರಂನ ಪೊಜಿಯೂರಿನಿಂದ ಕಾಸರಗೋಡಿನ ತಲಪಾಡಿವರೆಗೆ ಈ ಹೆದ್ದಾರಿ ಚಾಚಿಕೊಳ್ಳಲಿದೆ. ಈಗಾಗಲೇ ಭಾಗಶಃ ಸರ್ವೇ, ಸರ್ವೇ ಕಲ್ಲುಗಳ ಸ್ಥಾಪನೆಗಳು ನಡೆದಿವೆ.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಿರುವ ಈ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಲವೆಡೆ ಸರ್ವೆ ಹಾಗೂ ಗಡಿ ಗುರುತಿಸುವ ಕಾರ್ಯ ಸ್ಥಗಿತಗೊಂಡಿದೆ. ತಿರುವನಂತಪುರಂ, ಕೊಲ್ಲಂ, ತ್ರಿಶ್ಶೂರ್ ಮತ್ತು ಕೋಝಿಕ್ಕೋಡ್‍ನ ಅನೇಕ ಕರಾವಳಿ ಪ್ರದೇಶಗಳ ನಿವಾಸಿಗಳು ಈ ಯೋಜನೆಯ ವಿರುದ್ಧ ಮುಗಿಬಿದ್ದಿದ್ದಾರೆ. ಇದು 12 ಹಬ್‍ಗಳು, ರಾಜ್ಯದ ಅತಿ ಉದ್ದದ ಸೈಕಲ್ ಟ್ರ್ಯಾಕ್, ರೆಸ್ಟೋರೆಂಟ್‍ಗಳು, ಇವಿ ಚಾರ್ಜಿಂಗ್ ಸ್ಟೇಷನ್‍ಗಳು, ಬಸ್ ಬೇಗಳು ಮತ್ತು ಇತರ ಗಮನಾರ್ಹ ಯೋಜನೆಗಳನ್ನು ಪ್ರಸ್ತಾಪಿಸಿದೆ.
ಕರಾವಳಿ ಭೂ ಸಂರಕ್ಷಣಾ ವೇದಿಕೆಯ ಅಧ್ಯಕ್ಷೆ ಮ್ಯಾಗ್ಲೈನ್ ಪೀಟರ್ ಮಾತನಾಡಿ, ಈ ಹೆದ್ದಾರಿಯು ಕರಾವಳಿಯ 20 ಗ್ರಾಮ ಪಂಚಾಯಿತಿಗಳು ಮತ್ತು 11 ನಗರಸಭೆಗಳು ಮತ್ತು ನಾಲ್ಕು ಮಹಾನಗರ ಪಾಲಿಕೆಗಳ ಮೂಲಕ ಹಾದು ಹೋಗಲಿದೆ ಮತ್ತು 540.61 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ನಾವು ಯೋಜನೆಯ ಬಗ್ಗೆ ಹೆಚ್ಚು ಆತಂಕದಲ್ಲಿದ್ದೇವೆ ಮತ್ತು ಕರಾವಳಿ ಸಮುದಾಯಗಳು ಸಂಪೂರ್ಣವಾಗಿ ಕತ್ತಲೆಯಲ್ಲಿವೆ. ಅಧಿಕಾರಿಗಳು ವಿಸ್ತೃತ ಯೋಜನಾ ವರದಿ (ಡಿಪಿಆರ್) ಪ್ರಕಟಿಸದೆ ಅಥವಾ ಬಾಧಿತ ಪ್ರದೇಶಗಳ ಜನರೊಡನೆ ಚರ್ಚೆ ನಡೆಸದೆ ಗಡಿ ಕಲ್ಲುಗಳನ್ನು ಹಾಕುತ್ತಿದ್ದಾರೆ. ಕಂದಾಯ ಅಧಿಕಾರಿಗಳು, ಪೋಲೀಸರ ಜೊತೆಗೂಡಿ ಜನನಿಬಿಡ ಪ್ರದೇಶಗಳಲ್ಲಿ ದಬ್ಬಾಳಿಕೆ ಬಳಸಿ ಕಲ್ಲುಗಳನ್ನು ಹಾಕುತ್ತಿದ್ದಾರೆ. ಕರಾವಳಿ ಭಾಗದ ಶಾಸಕರಿಗೂ ಬೆಳವಣಿಗೆಗಳ ಬಗ್ಗೆ ಅರಿವಿಲ್ಲ ಎಂದು ಹೇಳಿರುವರು.
ಶೀಘ್ರದಲ್ಲೇ ಸೆಕ್ರೆಟರಿಯೇಟ್ ಪ್ರತಿಭಟನೆ
ಸಮರ್ಪಕ ಸಮೀಕ್ಷೆ ನಡೆಸದೆ ಯೋಜನೆ ಅನುಷ್ಠಾನಗೊಳಿಸದಂತೆ ಆಗ್ರಹಿಸಿ ಕರಾವಳಿ ಭಾಗದ ಸಮುದಾಯಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಆಯಾ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮುಂದಿನ ವಿಧಾನಸಭೆ ಅಧಿವೇಶನದ ವೇಳೆಗೆ ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸಲು ಮೀನುಗಾರರು ಮುಂದಾಗಿದ್ದಾರೆ. ವರ್ಷಗಳಿಂದ ಸ್ಥಳಾಂತರವನ್ನು ಎದುರಿಸುತ್ತಿರುವ ಕರಾವಳಿ ಸಮುದಾಯಗಳಿಗೆ ಸಮರ್ಪಕವಾಗಿ ಪುನರ್ವಸತಿ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈಗ ಅವರು ಅದೇ ಕರಾವಳಿಯಲ್ಲಿ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಯೋಜಿಸುತ್ತಿದ್ದಾರೆ ಮತ್ತು ಮೀನುಗಾರರಿಗೆ ಮನೆಗಳನ್ನು ನಿರ್ಮಿಸುವ ಹಕ್ಕನ್ನು ನಿರಾಕರಿಸುತ್ತಿದ್ದಾರೆ ಎಂದು ಮ್ಯಾಗ್ಲೈನ್ ಪೀಟರ್ ಹೇಳಿದರು.
ಕೋಝಿಕ್ಕೋಡ್‍ನ ಮೀನುಗಾರ ಗ್ರಾಮವಾದ ಮಡಪ್ಪಲ್ಲಿ ಮೂಲದ ಅಜಯಕುಮಾರ್ ಪಿ, ಅವರ ಮನೆಯು ಯೋಜನೆಯ ಮಾರ್ಗದೊಳಗೆ ಬರುವುದರಿಂದ ಸ್ಥಳಾಂತರಗೊಳ್ಳುವ ಭಯದಲ್ಲಿ ವಾಸಿಸುತ್ತಿದ್ದಾರೆ. ನನ್ನ ಮನೆ ಸಮುದ್ರದಿಂದ ಕೇವಲ 15 ಮೀಟರ್ ದೂರದಲ್ಲಿದೆ ಮತ್ತು ಯೋಜನೆಯ ಬಗ್ಗೆ ನಮಗೆ ಯಾವುದೇ ಸುಳಿವು ಇಲ್ಲ. ಈ ಯೋಜನೆಯು ನಮ್ಮ ಜೀವನೋಪಾಯಕ್ಕೆ ಸವಾಲಾಗಲಿದೆ. ಸ್ಥಳಾಂತರಗೊಂಡ ನಂತರ ನಾವು ಎಲ್ಲಿಗೆ ಹೋಗುತ್ತೇವೆ? ಪುನರ್ಗೆಹಮ್ ಯೋಜನೆಯ ಭಾಗವಾಗಿ ಸ್ಥಳಾಂತರಗೊಂಡ ಅನೇಕ ಜನರು ಮರಳಿ ಬರುತ್ತಿದ್ದಾರೆ. ನಾವು ಬದುಕಲು ಸಮುದ್ರವನ್ನೇ ಅವಲಂಬಿಸಿದ್ದೇವೆ. ಎನ್.ಎಚ್. 66 ಇಲ್ಲಿಂದ ಕೇವಲ 500 ಮೀಟರ್ ದೂರದಲ್ಲಿದೆ ಮತ್ತು ನಮಗೆ ಕರಾವಳಿ ಹೆದ್ದಾರಿ ಏಕೆ ಬೇಕು ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು 56 ಅಜಯ್ ಕುಮಾರ್ ಹೇಳಿದರು.
ಯೋಜನೆಯಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಕೇರಳ ರಸ್ತೆ ನಿಧಿ ಮಂಡಳಿ (ಕೆಆರ್‍ಎಫ್‍ಬಿ) ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಭಾಗವಾಗಿ 468 ಕಿಮೀ ವ್ಯಾಪ್ತಿಯ 44 ರೀಚ್‍ಗಳಲ್ಲಿ ಭೂಸ್ವಾಧೀನ ವಿವಿಧ ಹಂತಗಳಲ್ಲಿದೆ.
ಡಿಪಿಆರ್ ಇನ್ನೂ ಅಂತಿಮಗೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 25 ರೀಚ್‍ಗಳೊಂದಿಗೆ 280 ಕಿಮೀಗೆ ಕಲ್ಲು ಹಾಕುವ ಕಾರ್ಯವನ್ನು ಅಂತಿಮಗೊಳಿಸಲಾಗಿದೆ. ಸಮುದ್ರ ಕೊರೆತ ಸಮಸ್ಯೆಯಾಗಿದ್ದು, ಯೋಜನೆಗೆ ಧನಸಹಾಯ ನೀಡುವ ಸಂಸ್ಥೆಯಾದ ಕಿಪ್ಭಿ ಕರಾವಳಿ ಸಂರಕ್ಷಣಾ ಯೋಜನೆಗಳನ್ನು ಸಹ ಅನುಷ್ಠಾನಗೊಳಿಸುತ್ತಿದೆ. ಸಮುದ್ರ ಸವೆತವನ್ನು ಪರಿಹರಿಸಲು ಡಿಪಿಆರ್ ನಲ್ಲಿ ಪರಿಹಾರಗಳಿರಲಿವೆ. ಎಂದು ಅಧಿಕಾರಿ ಹೇಳಿದರು. ಯೋಜನೆಯ ಭಾಗವಾಗಿ ಕೇರಳ ರಾಜ್ಯ ಕರಾವಳಿ ಅಭಿವೃದ್ಧಿ ನಿಗಮಕ್ಕೆ ಪುನರ್ವಸತಿ ಕಾರ್ಯವನ್ನು ವಹಿಸಲಾಗಿದೆ. ಒಂದು ವರ್ಷದೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2026ರ ವೇಳೆಗೆ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
ತೀರದಿಂದ ತೀರಕ್ಕೆ:
ಕರಾವಳಿ ಹೆದ್ದಾರಿಯ ಒಟ್ಟು ದೂರ: 623 ಕಿಮೀ
ಹೆದ್ದಾರಿಯ ಉದ್ದೇಶಿತ ಅಗಲ: 14ಮೀ
ಹೆದ್ದಾರಿ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳ ಮೂಲಕ ಹಾದು ಕಾಸರಗೋಡು ತಲಪ್ಪಾಡಿ ಕರಾವಳಿಯವರೆಗೂ ತಲಪುತ್ತದೆ.
1993 ರ ರಾಷ್ಟ್ರೀಯ ಸಾರಿಗೆ ಯೋಜನೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಯನದ ಆಧಾರದ ಮೇಲೆ ಯೋಜನೆಯನ್ನು ಮೊದಲು ಪ್ರಸ್ತಾಪಿಸಲಾಗಿದೆ.
2017 ರ ನ್ಯಾಟ್‍ಪ್ಯಾಕ್ ಪ್ರಸ್ತಾಪಿಸಿದ ಜೋಡಣೆಯನ್ನು ಸರ್ಕಾರ ಅನುಮೋದಿಸಿದೆ.