ನವದೆಹಲಿ: '2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಲು ಇದೇ 31 ಕೊನೆಯ ದಿನವಾಗಿದ್ದು, ಈವರೆಗೂ ಸಂಸ್ಥೆ ಹಾಗೂ ವೈಯಕ್ತಿಕವಾಗಿ 7.4 ಕೋಟಿ ಜನ ರಿಟರ್ನ್ಸ್ ಸಲ್ಲಿಸಿದ್ದಾರೆ. ಇದು ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ 6.18ರಷ್ಟು ಅಧಿಕವಾಗಿದೆ' ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ.
'ಕಳೆದ ವರ್ಷ ಒಟ್ಟು 7.4 ಕೋಟಿ ಜನ ರಿಟರ್ನ್ಸ್ ಸಲ್ಲಿಸಿದ್ದರು. ಈ ಬಾರಿ ಇಲ್ಲಿಯವರೆಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದವರಲ್ಲಿ 5.16 ಕೋಟಿಯಷ್ಟು ಜನ ಶೂನ್ಯ ಆದಾಯ ತೆರಿಗೆದಾರರು ಎಂದು ಘೋಷಿಸಿಕೊಂಡಿದ್ದಾರೆ' ಎಂದಿದ್ದಾರೆ.
ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಶೇ 20.33ರಷ್ಟು ನೇರ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಕಳೆದ ವರ್ಷದ ₹19.68 ಲಕ್ಷ ಕೋಟಿಯಷ್ಟಿತ್ತು. 2021-22ರಲ್ಲಿ 6.94 ಕೋಟಿಯಷ್ಟು ಜನ ಐಟಿ ರಿಟರ್ನ್ಸ್ ಸಲ್ಲಿಸಿದ್ದರು. ಆಗ 5.05 ಕೋಟಿಯಷ್ಟು ಜನ ಶೂನ್ಯ ತೆರಿಗೆದಾರರಾಗಿದ್ದರು. 2020-21ರಲ್ಲಿ 6.72ಕೋಟಿ, 2019-20ರಲ್ಲಿ 6.47 ಕೋಟಿಯಷ್ಟು ಮಂದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರು. ಇವರಲ್ಲಿ ಶೂನ್ಯ ತೆರಿಗೆದಾರರ ಸಂಖ್ಯೆ ಕ್ರಮವಾಗಿ 4.84 ಕೋಟಿ ಹಾಗೂ 2.9 ಕೋಟಿಯಷ್ಟಿತ್ತು' ಎಂದಿದ್ದಾರೆ.
'ಟಿಡಿಎಸ್ ಸರಳಗೊಳಿಸಲು ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು. ಹೊಸ 26 ಎಎಸ್ ಅರ್ಜಿ ಹಾಗೂ ಅರ್ಜಿ ಸಲ್ಲಿಸಿದವರ ಮೇಲೆ ನಿಗಾ ವ್ಯವಸ್ಥೆಯೂ ಐಟಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದರೊಂದಿಗೆ ಇ-ಮೇಲ್ ಹಾಗೂ ಎಸ್‌ಎಂಎಸ್ ಮೂಲಕವೂ ಆದಾಯ ತೆರಿಗೆ ಸಲ್ಲಿಸುವವರಿಗೆ ಮಾಹಿತಿ ನೀಡಲಾಗುತ್ತಿತ್ತು. ಜತೆಗೆ ಸಾರ್ವಜನಿಕವಾಗಿ ಜಾಗೃತಿ ಅಭಿಯಾನವನ್ನೂ ಆದಾಯ ತೆರಿಗೆ ಇಲಾಖೆ ಕೈಗೊಂಡಿತ್ತು' ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.