ನವದೆಹಲಿ: ಅಮೆರಿಕದ ಅಲಾಸ್ಕ ಬಳಿ ಭೀಕರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ.
ಅಲಸ್ಕಾದ ಪೆನಿನ್ಸುಲಾ ಪ್ರದೇಶದ ಬಳಿ ಇಂದು ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ಸಂಸ್ಥೆ ಹೇಳಿದ್ದು ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ.
ಭೂಕಂಪ ಮಾಪನ ಕೇಂದ್ರ ಅಲಾಸ್ಕ, ಪೆನಿನ್ಸುಲಾ ದ್ವೀಪದದಲ್ಲಿ ಭೂಮಿಯಿಂದ 9.3 ಕಿ. ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದ್ದು, 7.4 ತೀವ್ರತೆಯ ಭೂಕಂಪ ಸಂಭವಿಸಿರುವುದರಿಂದ ಸುನಾಮಿ ಸಾಧ್ಯತೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಖಚಿತಪಡಿಸಿದೆ.
ಅಮೆರಿಕದ ಅಲಸ್ಕಾ ದ್ವೀಪದಲ್ಲಿ ಭೂಕಂಪ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ಹಲವಾರು ವರ್ಷಗಳಿಂದ ಅಲಸ್ಕಾ, ಪೆನಿನ್ಸುಲಾ ದ್ವೀಪದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಬಾರಿ ಭೂಕಂಪ ಸಂಭವಿಸಿದೆ. ಆಗ ಸುನಾಮಿಯ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಎರಡು ವಾರಗಳ ಹಿಂದೆ ಅಲಾಸ್ಕಾದ ಆಂಕಾರೇಜ್‌ನಲ್ಲಿ ಲಘು ಭೂಕಂಪ ಸಂಭವಿಸಿತ್ತು.
2020ರ ಜುಲೈನಲ್ಲಿ 7.8ರಷ್ಟು ತೀವ್ರತೆಯ ಭೂಕಂಪ ಈ ಭಾಗದಲ್ಲಿ ಸಂಭವಿಸಿತ್ತು. ಆಗಲೂ ಭೂಕಂಪ ಪ್ರಬಲವಾಗಿದ್ದ ಕಾರಣ ದಕ್ಷಿಣ ಅಲಸ್ಕಾ, ಅಲಸ್ಕಾ ಪೆನಿನ್ಸುಲಾ ಮತ್ತು ಅಲ್ಯೂಶಿಯನ್ ದ್ವೀಪಗಳ ಸುತ್ತಲಿನ 300 ಕಿ. ಮೀ. ವಿಸ್ತೀರ್ಣಕ್ಕೆ ಸುನಾಮಿ ಎಚ್ಚರಿಕೆಯನ್ನು ಕೊಡಲಾಗಿತ್ತು.