ಮಂಜೇಶ್ವರ: ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್ ಸಿ)ದ ಶೋಚನೀಯ ಸ್ಥಿತಿಗೆ ಪರಿಹಾರ ಕಲ್ಪಿಸಲು 8 ಕೋಟಿ ರೂ.ಗಳ ಯೋಜನೆ ಸಿದ್ಧವಾಗಿದೆ ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
1944 ರಲ್ಲಿ ಸ್ಥಳೀಯ ನಿವಾಸಿ ಉಮೇಶ್ ರಾವ್ ಎಂಬವರ ಕುಟುಂಬದವರು ನೀಡಿದ ಕಟ್ಟಡದಲ್ಲಿ ಆಸ್ಪತ್ರೆಯು ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಆರಂಭದಲ್ಲಿ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ವರ್ಷಗಳ ನಂತರ, ಸರ್ಕಾರ ಮತ್ತು ಸ್ಥಳೀಯ ಜನರ ಸಹಕಾರದೊಂದಿಗೆ, ಒಳರೋಗಿಗಳ ಚಿಕಿತ್ಸೆ, ಹೆರಿಗೆ ಮತ್ತು ಆಂಬ್ಯುಲೆನ್ಸ್‍ನಂತಹ 24 ಗಂಟೆಗಳ ಸೇವೆಗಳನ್ನು ಒದಗಿಸಲಾಗಿತ್ತು. ಸ್ಥಳೀಯರು ಈ ಆಸ್ಪತ್ರೆಯನ್ನು ಮಂಜೇಶ್ವರ ಧರ್ಮಾಸ್ಪತ್ರೆ ಎಂದು ಕರೆಯುತ್ತಿದ್ದರು. ಏತನ್ಮಧ್ಯೆ, ಈ ಆರೋಗ್ಯ ಕೇಂದ್ರವು ನಂತರದ ಸರ್ಕಾರಗಳ ನಿರ್ಲಕ್ಷ್ಯದಿಂದ ಅನುಕೂಲತೆ ಮತ್ತು ಸೇವೆಗಳ ಕೊರತೆಯಿಂದಾಗಿ ಡಿ ದರ್ಜೆಗೆ ಇಳಿದು ಅನಾರೋಗ್ಯಕ್ಕೊಳಗಾಯಿತು. 24 ಗಂಟೆಗಳ ಸೇವೆಯನ್ನು ಹನ್ನೆರಡು ಗಂಟೆಗೆ ಇಳಿಸಲಾಯಿತು.
ಹಾಲಿ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಬ್ಲಾಕ್ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಬ್ಲಾಕ್ ಪಂಚಾಯಿತಿ ಮಧ್ಯಸ್ಥಿಕೆಯಲ್ಲಿ ಇಲ್ಲಿ ದಂತ ಚಿಕಿತ್ಸಾಲಯ ಆರಂಭಿಸಲಾಗಿತ್ತು. ಅಂದಿನ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸಿದ್ದ ದಂತ ಚಿಕಿತ್ಸಾಲಯ ಸರ್ಕಾರ ಅಗತ್ಯ ವೈದ್ಯರನ್ನು ನೇಮಿಸದ ನೀಡದ ಕಾರಣ ಒಂದು ವರ್ಷದಿಂದ ಮುಚ್ಚಿದೆ.
ಕೋವಿಡ್‍ನಿಂದಾಗಿ ಗಡಿ ಮುಚ್ಚುಗಡೆ ಮತ್ತು ಮಂಗಳೂರು ಸಂಪರ್ಕ ಕಡಿತದಿಂದ 22 ಜನರ ಸಾವಿಗೀಡಾದ ಸಂದರ್ಭ ಮತ್ತೆ ಸಕ್ರಿಯಗೊಂಡ ಆಸ್ಪತ್ರೆಯು ಎದುರಿಸುತ್ತಿರುವ ಪ್ರಮುಖ ಸವಾಲು ಹಳೆಯ ಕಟ್ಟಡವಾಗಿದೆ.
ಇಲ್ಲಿನ ಶೋಚನೀಯ ಸ್ಥಿತಿಗತಿಗಳನ್ನು ಬಗೆಹರಿಸಲು ಶಾಸಕ ಎ.ಕೆ.ಎಂ.ಅಶ್ರಫ್ ಮಧ್ಯಪ್ರವೇಶಿಸಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಧಿಕಾರಿಗಳೊಂದಿಗೆ ಚರ್ಚಿಸಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಪ್ಯಾಕೇಜ್‍ನಿಂದ 4 ಕೋಟಿ ರೂ., ಎನ್‍ಎಚ್‍ಎಂನಿಂದ 4 ಕೋಟಿ ರೂ.ಗಳನ್ನು ಮಂಜೂರು ಮಾಡಲು ಒಪ್ಪಿಗೆ ನೀಡಿರುವರು. ಕಾಸರಗೋಡು ಪ್ಯಾಕೇಜ್‍ನಿಂದ ಎರಡು ಅಂತಸ್ತಿನ ಕಟ್ಟಡ ಮತ್ತು ಎನ್‍ಎಚ್‍ಎಂ ಅನುದಾನದಲ್ಲಿ ನಿರ್ಮಿಸಲಾಗುವ ಮೂರು ಅಂತಸ್ತಿನ ಕಟ್ಟಡವು ಒಳರೋಗಿಗಳ ಚಿಕಿತ್ಸಾ ಸೌಲಭ್ಯಗಳು, ಮಿನಿ ಆಪರೇಷನ್ ಥಿಯೇಟರ್, ಡಯಾಲಿಸಿಸ್ ಸೆಂಟರ್ ಮತ್ತು ಅತ್ಯುತ್ತಮ ಲ್ಯಾಬ್ ಮತ್ತು ಫಾರ್ಮಸಿ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ. ಕೆಡಿಪಿ ಮೂಲಕ ಕಟ್ಟಡಕ್ಕೆ ತಿಂಗಳೊಳಗೆ ಟೆಂಡರ್ ನೀಡಲಾಗುವುದು ಎಂದು ಶಾಸಕರು ತಿಳಿಸಿರುವರು.