ಜೆನಿನ್ : ಇಸ್ರೇಲ್ ಸೇನೆ ಮತ್ತು ಪ್ಯಾಲೆಸ್ಟೀನ್ ಉಗ್ರವಾದಿಗಳ ನಡುವಿನ ಸಂಘರ್ಷ ಮುಂದುವರೆದಿದ್ದು, ಆಕ್ರಮಿತ ವೆಸ್ಟ್‌ಬ್ಯಾಂಕ್‌ನಲ್ಲಿಯ ಬಂಡುಕೋರರ ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಸೋಮವಾರ ಡ್ರೋನ್ ದಾಳಿ ನಡೆಸಿವೆ ಮತ್ತು ಸೇನೆಯ ನೂರಾರು ತುಕಡಿಗಳನ್ನು ಸ್ಥಳದಲ್ಲಿ ಜಮಾವಣೆ ಮಾಡಿದೆ.
ಈ ದಾಳಿಯಲ್ಲಿ ಪಾಲೆಸ್ಟೀನ್‌ನ ಸುಮಾರು ಎಂಟು ಮಂದಿ ಮೃತಪಟ್ಟು, ಹತ್ತಾರು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಇಸ್ರೇಲಿ ಪಡೆಗಳು ಈ ಪ್ರದೇಶದಲ್ಲಿ ಕೈಗೊಂಡಿರುವ ಅತ್ಯಂತ ದೊಡ್ಡ ಕಾರ್ಯಾಚರಣೆ ಇದಾಗಿದೆ. ಈ ಹಠಾತ್‌ದಾಳಿಯು, ಎರಡು ದಶಕದ ಹಿಂದಿನ ಪಾಲೆಸ್ಟೀನ್ ದಂಗೆ ವೇಳೆ ನಡೆಸಲಾಗಿದ್ದ ಭಾರಿ ಸೇನಾ ಕಾರ್ಯಾಚರಣೆಯನ್ನು ಹೋಲುತ್ತದೆ ಎನ್ನಲಾಗಿದೆ.
ಇಸ್ರೇಲ್ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಈಚೆಗೆ ಪ್ಯಾಲೆಸ್ಟೀನ್ ಬಂಡುಕೋರರು ಸರಣಿ ದಾಳಿ ನಡೆಸಿದ್ದರು ಮತ್ತು ಕಳೆದ ತಿಂಗಳು ಗುಂಡಿನ ದಾಳಿ ನಡೆಸಿ ನಾಲ್ವರು ಇಸ್ರೇಲಿ ಪ್ರಜೆಗಳನ್ನು ಹತ್ಯೆಗೈದಿದ್ದರು. ಈ ಕ್ರಿಯೆಗಳಿಗೆ ಕಠಿಣವಾದ ಪ್ರತಿಕ್ರಿಯೆ ನೀಡಬೇಕೆಂದು ದೇಶದೊಳಗೆ ಹೆಚ್ಚಾಗಿರುವ ಒತ್ತಡದ ಹಿನ್ನೆಲೆಯಲ್ಲಿ ಇಸ್ರೇಲ್ ಈ ದಾಳಿ ನಡೆಸಿದೆ ಎನ್ನಲಾಗಿದೆ.