ನವದೆಹಲಿ: ಆಹಾರ ತಯಾರಿಕೆಯಲ್ಲಿ ಪ್ರಮುಖವಾದ ಟೊಮೆಟೋ ಬೆಲೆ ಗಗನಕ್ಕೇರಿರುವಂತೆಯೇ ಕೇಂದ್ರ ಸರ್ಕಾರ ಕೆಜಿಗೆ ರೂ. 90 ರಂತೆ ರಿಯಾಯಿತಿ ಬೆಲೆಯಲ್ಲಿ ಟೊಟೊಮೋ ಮಾರಾಟ ಆರಂಭಿಸುವ ಮೂಲಕ ಗ್ರಾಹಕರಿಗೆ ತುಸು ನೆಮ್ಮದಿಯನ್ನು ನೀಡಿದೆ.
ಭಾರತೀಯ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಕೇಂದ್ರ ಸರ್ಕಾರದ ಪರವಾಗಿ ಟೊಮೆಟೊ ಮಾರಾಟ ನಡೆಸುತ್ತಿವೆ. ಕಳೆದ ಕೆಲವು ವಾರಗಳಿಂದ ಟೊಮೊಟೊ ಸಗಟು ದರ ತೀವ್ರಗತಿಯಲ್ಲಿ ಏರಿಕೆಯಾಗಿದ್ದು, ಶುಕ್ರವಾರ ಭಾರೀ ಮಳೆಯಿಂದಾಗಿ ದೇಶದ ಹಲವು ಕಡೆಗಳಲ್ಲಿ ಒಂದು ಕೆಜಿ ಟೊಮೆಮೊ ಬೆಲೆ ರೂ.244ಕ್ಕೆ ಏರಿತ್ತು.
"17,000 ಕೆಜಿ ಟೊಮೆಟೊಗಳಲ್ಲಿ ಶೇ.80 ರಷ್ಟು ಸಂಜೆಯವರೆಗೆ ಮಾರಾಟವಾಗಿದೆ. ನಾಳೆಯಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಮಾರಾಟ ಪ್ರಮಾಣವನ್ನು ಹೆಚ್ಚಿಸುತ್ತೇವೆ ಎಂದು ಎನ್‌ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕ ಅನಿಸ್ ಜೋಸೆಫ್ ಚಂದ್ರ ಹೇಳಿದ್ದಾರೆ.
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೆಡೆ ರಿಯಾಯಿತಿ ದರದ ಟೊಮೇಟೊ ಖರೀದಿಗೆ ಜನರು ಸರತಿ ಸಾಲಿನಲ್ಲಿ ಬರುತ್ತಿದ್ದಾರೆ. ಕರೋಲ್ ಬಾಗ್, ಪಟೇಲ್ ನಗರ, ಪುಸಾ ರಸ್ತೆ, ಸಿಜಿಒ ಕಾಂಪ್ಲೆಕ್ಸ್, ನೆಹರು ಪ್ಲೇಸ್, ಗೋವಿಂದ್ ಲಾಲ್ ಶಿಕಾ ಮಾರ್ಗ್, ಆದರ್ಶ ನಗರ, ವಜೀರ್‌ಪುರದ ಜೆಜೆ ಸ್ಲಂ ಮತ್ತು ಧೋಧಪುರ್ ಶಿವಮಂದಿರದಂತಹ ಪ್ರದೇಶಗಳಲ್ಲಿ ಸುಮಾರು 20 ಸಂಚಾರ ವಾಹನಗಳನ್ನು ರವಾನಿಸಲಾಗಿದೆ ಎಂದು ಅವರು ತಿಳಿಸಿದರು.