ತಿರುವನಂತಪುರಂ: ಟೀಕೆ, ದೂರುಗಳ ಬಳಿಕ ಪ್ಲಸ್ ಒನ್ ಸೀಟು ಬಿಕ್ಕಟ್ಟನ್ನು ಬಗೆಹರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
97 ಹೊಸ ಬ್ಯಾಚ್‍ಗಳನ್ನು ಮಂಜೂರು ಮಾಡಲು ಸರ್ಕಾರ ಮುಂದಾಗಿದೆ. ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಮುಖ್ಯಮಂತ್ರಿಗೆ ಮನವಿ ಹಸ್ತಾಂತರಿಸಿದರು. ಪಾಲಕ್ಕಾಡ್‍ನಿಂದ ಕಾಸರಗೋಡುವರೆಗಿನ ಜಿಲ್ಲೆಗಳಲ್ಲಿ ಸೀಟು ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಹೊಸ ಕ್ರಮಕ್ಕೆ ಮುಂದಾಗಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಎರಡನೇ ಪೂರಕ ಹಂಚಿಕೆಯಲ್ಲಿ ಇಂದು ಮತ್ತು ನಾಳೆ ಪ್ರವೇಶ ನಡೆಯಲಿದೆ. ಈ ನಡುವೆ ಸÀರ್ಕಾರ ಶೀಘ್ರ ಪರಿಹಾರ ಕಲ್ಪಿಸಿದೆ. ಕೊನೆಯ ಹಂಚಿಕೆಯ ನಂತರ, ಉಳಿದ ವಿದ್ಯಾರ್ಥಿಗಳಿಗೆ ಹೊಸ ಬ್ಯಾಚ್ ಅನ್ನು ಹಂಚಲಾಗುತ್ತದೆ. ಹೆಚ್ಚುವರಿಯಾಗಿ 5000 ಸೀಟು ಸಿಕ್ಕರೆ ಮಲಬಾರಿನ ಬಿಕ್ಕಟ್ಟು ಬಗೆಹರಿಯಬಹುದು ಎಂಬುದು ಶಿಕ್ಷಣ ಇಲಾಖೆ ಲೆಕ್ಕಾಚಾರ. ಮಲಪ್ಪುರಂ ಜಿಲ್ಲೆಗೇ ಮೊದಲ ಆದ್ಯತೆ ಸಿಗಲಿದೆ ಎಂದು ಭಾವಿಸಲಾಗಿದೆ.
ಪ್ಲಸ್ ಒನ್ ಎರಡನೇ ಪೂರಕ ಹಂಚಿಕೆ ಪಟ್ಟಿ ಪ್ರಕಟಿಸಿದಾಗ 17,427 ವಿದ್ಯಾರ್ಥಿಗಳಿಗೆ ಸೀಟು ಲಭ್ಯವಾಗಿಲ್ಲ. 6,791 ಮಂದಿ ಮಾತ್ರ ಪ್ರವೇಶ ಪಡೆದಿದ್ದಾರೆ. ಮಲಬಾರ್ ಪ್ರದೇಶದಿಂದ ಪ್ಲಸ್ ಒನ್ ಸೀಟಿಗೆ 20,224 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ 4,440 ಮಂದಿಗೆ ಮಾತ್ರ ಹಂಚಿಕೆಯಾಗಿದೆ. ಪಾಲಕ್ಕಾಡ್ 3,088 ಅರ್ಜಿದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಕೋಝಿಕ್ಕೋಡ್‍ನಿಂದ 2,217, ವಯನಾಡಿನಿಂದ 116, ಕಣ್ಣೂರಿನಿಂದ 949 ಮತ್ತು ಕಾಸರಗೋಡಿನಿಂದ 1,076 ಮಂದಿ ವಿದ್ಯಾರ್ಥಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಪ್ಲಸ್ ಒನ್ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಾಗದೆ ಸರ್ಕಾರವನ್ನು ತೀವ್ರವಾಗಿ ಟೀಕಿಸಲಾಯಿತು. ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಪರಿಹಾರ ಕಂಡುಕೊಳ್ಳುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಸೀಟು ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಪರಿಹಾರ ಸಿಗದಿದ್ದರೆ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪತ್ರಕ್ಕೆ ತಕ್ಷಣ ಉತ್ತರ ನೀಡದಿದ್ದಲ್ಲಿ ಭೀಕರ ಪರಿಣಾಮ ಎದುರಿಸಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಅಪರಾಧಕ್ಕೆ ಮುಖ್ಯಮಂತ್ರಿ ಹಾಗೂ ಸರಕಾರವೇ ನೇರ ಹೊಣೆ ಎಂದು ಬಹಿರಂಗವಾಗಿಯೇ ಹೇಳಿದ್ದರು.