ನವದೆಹಲಿ: ಓಪ್ಪೋ ಮೊಬೈಲ್, ವಿವೋ, ಶಿಯೋಮಿ ಟೆಕ್ನಾಲಜಿ ಸೇರಿದಂತೆ ಚೀನಾ ಸ್ಮಾರ್ಟ್ ಫೋನ್ ಮೇಕರ್ ಸಂಸ್ಥೆಗಳು 9 ಸಾವಿರ ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿದೆ.
ಈ ಮಾಹಿತಿಯನ್ನು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸಂಸತ್ ನಲ್ಲಿ ಹಂಚಿಕೊಂಡಿದ್ದಾರೆ.
2018-19, 2022-23 ರ ಅವಧಿಯಲ್ಲಿ ಕಸ್ಟಮ್ಸ್ ಸುಂಕ, ಜಿಎಸ್ ಟಿ ಸೇರಿದಂತೆ ಈ ಚೀನಾ ಸಂಸ್ಥೆಗಳು ಒಟ್ಟು 9 ಸಾವಿರ ಕೋಟಿ ರೂಪಾಯಿಗಳ ತೆರಿಗೆ ವಂಚನೆ ಮಾಡಿವೆ.
ಸರ್ಕಾರ 1,629.87 ಕೋಟಿ ರೂಪಾಯಿಗಳನ್ನು ಮರಳಿ ಪಡೆದಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಓಪ್ಪೊ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ 5,086 ಕೋಟಿ ರೂಪಾಯಿ ತೆರಿಗೆ ಹಾಗೂ 4,403 ಕೋಟಿ ರೂಪಾಯಿಗಳಷ್ಟು ಕಸ್ಟಮ್ಸ್ ಸುಂಕ ಹಾಗೂ ಜಿಎಸ್ ತಿ ವಿಭಾಗದಲ್ಲಿ 683 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ.
ವಿವೋ ಸಂಸ್ಥೆ ಒಟ್ಟಾರೆ, 2,923.25 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ. ಶಿಯೋಮಿ 851.14 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಿದೆ. 2019-20 ರ ಅವಧಿಯಲ್ಲಿ ಓಪ್ಪೋ ಮೊಬೈಲ್ ನಿಂದ 450 ಕೋಟಿ ರೂಪಾಯಿಗಳನ್ನು ಪಡೆಯಲಾಗಿದೆ. 2,217 ಕೋಟಿ ರೂಪಾಯಿ ತೆರಿಗೆ ಬಾಕಿ ಹೊಂದಿರುವ ವಿವೋ ಇಂಡಿಯಾದಿಂದ 2020-21 ರಲ್ಲಿ 72 ಕೋಟಿ ರೂಪಾಯಿಗಳನ್ನು ಪಡೆಯಲಾಗಿದೆ. 2019-20 ಶಿಯೋಮಿ ಟೆಕ್ನಾಲಜಿಯಿಂದ 46 ಲಕ್ಷ ರೂಪಾಯಿ ವಾಪಸ್ ಪಡೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.