ಕುಂಬಳೆ: ಕುಂಬಳೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತನನ್ನು ಪಂಚಾಯಿತಿ ಕಚೇರಿಯಿಂದ ಹೊರ ಕರೆದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಂಚಾಯಿತಿ ಸದಸ್ಯ, ಯೂಸುಫ್ ಉಳುವಾರ್ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಕಂಚಿಕಟ್ಟೆ ಮಳಿ ಹೌಸ್ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ.
ಕುಂಬಳೆಯಲ್ಲಿ ಮಾಹಿತಿ ಕಾರ್ಯಕರ್ತರಾಗಿರುವ ಸುಬ್ರಹ್ಮಣ್ಯ ನಾಯಕ್ ಅವರನ್ನು ಪಂಚಾಯಿತಿ ಅಪಲೇಟ್ ಅಥಾರಿಟಿ ಇತ್ತೀಚೆಗೆ ಮಾಹಿತಿ ಸಂಗ್ರಹಕ್ಕಾಗಿ ಕಚೇರಿಗೆ ಕರೆಸಿಕೊಂಡಿದ್ದು, ಈ ಸಂದರ್ಭ ಸ್ಥಳದಲ್ಲಿದ್ದ ಯೂಸುಫ್ ತನ್ನನ್ನು ಕುರ್ಚಿಯಿಂದ ಹಿಡಿದೆಳೆದು, ಮಾಹಿತಿ ಹಕ್ಕು ವಿಷಯದಲ್ಲಿ ನಿರಂತರ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪಂಚಾಯಿತಿಯ ಕೆಲವೊಂದು ಲೋಪಗಳ ಬಗ್ಗೆ ಸುಬ್ರಹ್ಮಣ್ಯ ನಾಯಕ್ ಅವರು ಈ ಹಿಂದಿನಿಂದಲೂ ಮಾಹಿತಿ ಹಕ್ಕು ಆಯೋಗದಿಂದ ಮಾಹಿತಿ ಪಡೆದು ಕಾನೂನು ಹೋರಾಟ ನಡೆಸುವ ಮೂಲಕ ಭ್ರಷ್ಟಾಚಾರಕ್ಕೆ ವಿರುದ್ಧವಾಗಿ ಹೋರಾಟ ನಡೆಸುತ್ತಿದ್ದಾರೆ. ಇದನ್ನು ಸಹಿಸದ ಕೆಲವು ವ್ಯಕ್ತಿಗಳು ಬೆದರಿಕೆ, ಹಲ್ಲೆಗೆ ಮುಂದಾಗುತ್ತಿದ್ದಾರೆನ್ನಲಾಗಿದೆ.