ಕಾಸರಗೋಡು: ಜರ್ಮನಿಯಿಂದ ಈಜಿಪ್ಟ್‍ಗೆ ಐಶಾರಾಮಿ ಕಾರುಗಳನ್ನು ಕೊಂಡೊಯ್ಯುತ್ತಿದ್ದ ಸರಕು ಸಾಗಾಟದ ಹಡಗಿಗೆ ಬೆಂಕಿ ತಗುಲಿ ಒಬ್ಬಾತ ಮೃತಪಟ್ಟಿರುವುದಾಗಿ ಮಾಹಿತಿಯಿದೆ. ಭಾರತದ ಪ್ರಜೆ ಚಿಂತಕ್ ಭಾಯಿ ಎಂದು ಗುರುತಿಸಲಾಗಿದೆ. ಹಡಗಿನಲ್ಲಿರುವ ಸಿಬ್ಬಂದಿ ಬಹುತೇಕಮಂದಿ ಭಾರತೀಯರಾಗಿದ್ದು, ಇವರಲ್ಲಿ ಕಾಸರಗೋಡು ಪಾಲಕುನ್ನು ಆರಾಟುಕಡವು ನಿವಾಸಿ ಬಿನೀಶ್ ಎಂಬವರೂ ಒಳಗೊಂಡಿದ್ದಾರೆ. ಇವರೆಲ್ಲರೂ ಸುರಕ್ಷಿತರಗಿರುವುದಾಗಿ ಮಾಹಿತಿಯಿದೆ.
ಡಚ್ ದ್ವೀಪದ ಆಂಲ್ಯಾಂಡ್ ಸನಿಹ ಹಡಗಿಗೆ ಬೆಂಕಿ ತಗುಲಿದ್ದು, ಹಡಗಿನಲ್ಲಿದ್ದ ಹಲವು ಮಂದಿಗೆ ಗಾಯಗಳುಂಟಾಗಿದೆ. ಫ್ರೀಮಾಂಟಿಲ್ ಹೈವೆ ಎಂಬ ಹಡಗಿನಲ್ಲಿ ಸುಮಾರು 3ಸಾವಿರ ಕಾರುಗಳನ್ನು ಹೇರಿಕೊಂಡು ಈಜಿಪ್ಟ್‍ಗೆ ತೆರಳುತ್ತಿದ್ದಾಗ ಜುಲೈ 26ರಂದು ಹಡಗಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಇದರಲ್ಲಿದ್ದವರು ಸಮುದ್ರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ನೆದರ್‍ಲ್ಯಾಂಡ್ ಕರವಳಿ ಭದ್ರತಾಪಡೆ ಕಾರ್ಯಾಚರಣೆ ನಡೆಸಿ ಸಿಬ್ಬಂದಿಯನ್ನು ರಕ್ಷಿಸಿದ್ದು, ಹಡಗಿನ ಬೆಂಕಿ ಶಮನಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಹಡಗಿನಲ್ಲಿ 25ರಷ್ಟು ಕಾರ್ಮಿಕರಿದ್ದರೆನ್ನಲಾಗಿದೆ. ದುರಂತದಿಂದ ಪಾರಾದವರನ್ನು ಹೆಲಿಕಾಪ್ಟರ್ ಹಾಗೂ ಲೈಫ್‍ಬೋಟುಗಳ ಮೂಲಕ ದಡಸೇರಿಸಲಾಗಿದೆ. ಇವರಲ್ಲಿ 16ಮಂದಿಗೆ ಸುಟ್ಟ ಗಾಯಗಳುಂಟಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.