ಕಾಸರಗೋಡು: ನಗರಸಭೆ ಹಾಗೂ ಆಸುಪಾಸಿನ ವಿವಿಧ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಬಾವಿಕ್ಕೆರೆಯಲ್ಲಿ ನೂತನವಾಗಿ ನಿರ್ಮಾಣಗೊಮಡಿರುವ ಅಣೆಕಟ್ಟು ಪ್ರದೇಶದಲ್ಲಿ ಕೈಗೊಳ್ಳಲಿರುವ ಪ್ರವಾಸೋದ್ಯಮ ಯೋಜನೆಗೆ 4.91 ಕೋಟಿ ರೂಪಾಯಿ ಮಂಜೂರಾಗಿದೆ.
ಹಲವು ವರ್ಷಗಳ ಕಾಯುವಿಕೆಯ ನಂತರ, ಬಾವಿಕ್ಕೆರೆ ಬ್ಯಾರೇಜ್ ಒಳಗೊಂಡಿರುವ ಪ್ರದೇಶವು ನೈಸರ್ಗಿಕ ಸೌಂದರ್ಯ ಮತ್ತು ನೀರಿನ ಸಂಗ್ರಹದಿಂದ ಸುಂದರ ಪ್ರದೇಶವಾಗಿದ್ದು, ಈ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಬರಲಾರಂಭಿಸಿದ್ದಾರೆ, ಆದರೆ ಈ ಪ್ರದೇಶದಲ್ಲಿ ಅವರಿಗೆ ಅಗತ್ಯ ಸೌಲಭ್ಯಗಳ ಕೊರತೆಯಿರುವುದುನ್ನು ಪರಿಗಣಿಸಿ ಅತ್ಯಂತ ಸುಂದರವಾಗಿರುವ ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಶಾಸಕ ಸಿ.ಎಚ್ ಕುಞಂಬು ಅವರ ನೇತೃತ್ವದಲ್ಲಿ ಡಿಪಿಆರ್ ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಈ ನಿಟ್ಟಿನಲ್ಲಿ ಹಣ ಮಂಜೂರಾಗಿ ಲಭಿಸಿದ್ದು, ಎರಡು ಹಂತಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು ಮತ್ತು ಎರಡನೇ ಹಂತದಲ್ಲಿ ಸೇತುವೆ ಸೇರಿದಂತೆ ಇತರ ವ್ಯವಸ್ಥೆಗಳಿಗಾಗಿ ಮೊತ್ತ ಮೀಸಲಿಡಲಾಗಿದೆ. ಯೋಜನೆಯನ್ವಯ ಬಾವಿಕ್ಕೆರೆಯಿಂದ ಆರೂವರೆ ಕಿಲೋಮೀಟರ್ ವರೆಗೆ ಬೋಟಿಂಗ್ ವ್ಯವಸ್ಥೆ ನಡೆಸುವ ಯೋಜನೆಯನ್ನೂ ಒಳಪಡಿಸಲಾಗಿದೆ. ಬೋಟಿಂಗ್ ಯೋಜನೆ ಸಾಕಾರಗೊಂಡಲ್ಲಿ ಪ್ರಕೃತಿ ರಮಣೀಯ ಪ್ರದೇಶಗಳನ್ನು ವೀಕ್ಷಿಸುವ ಮೂಲಕ ಪಾಂಡಿಕಂಡಂ ತನಕ ಬೋಟ್ ಸೇವೆ ಮಾಡಬಹುದಾಗಿದೆ. ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಶಾಸಕ ಸಿ.ಎಚ್ ಕುಞಂಬು ಹಾಗೂ ಅಧಿಕಾರಿಗಳ ತಂಡ ಬಾವಿಕೆರೆಗೆ ಭೇಟಿ ನೀಡಿತು.