ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಅಬುಧಾಬಿಯ ಶಿಕ್ಷಣ ಮತ್ತು ಜ್ಞಾನ ಇಲಾಖೆ (ಎಡಿಇಕೆ) ಶನಿವಾರ ಗಲ್ಫ್ ದೇಶದಲ್ಲಿ ಐಐಟಿ ದೆಹಲಿ ಕ್ಯಾಂಪಸ್ ಸ್ಥಾಪನೆ ಸಂಬಂಧ ಒಪ್ಪಂದಕ್ಕೆ (ಎಂಒಯು) ಸಹಿ ಮಾಡಿವೆ.
ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸಮ್ಮುಖದಲ್ಲೇ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ದೆಹಲಿಯು ಐಐಟಿ ಮದ್ರಾಸ್ ನಂತರ ವಿದೇಶದಲ್ಲಿ ಕ್ಯಾಂಪಸ್ ಸ್ಥಾಪಿಸುತ್ತಿರುವ ಎರಡನೇ ಐಐಟಿಯಾಗಿದೆ. ಕಳೆದ ವಾರ, ಐಐಟಿ ಮದ್ರಾಸ್ ತಾಂಜಾನಿಯಾದ ಜಂಜಿಬಾರ್‌ನಲ್ಲಿ ತನ್ನ ಕ್ಯಾಂಪಸ್ ತೆರೆಯಲು ಎಂಒಯುಗೆ ಸಹಿ ಹಾಕಿದೆ.
ಅಬುಧಾಬಿಯಲ್ಲಿಐಐಟಿ ದೆಹಲಿ ಕ್ಯಾಂಪಸ್ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದು ಭಾರತದ ಶಿಕ್ಷಣ, ಅಂತರಾಷ್ಟ್ರೀಯೀಕರಣದಲ್ಲಿ ಹೊಸ ಅಧ್ಯಾಯ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಟ್ವೀಟ್ ಮಾಡಿದ್ದಾರೆ.
"ನವ ಭಾರತ ನಾವೀನ್ಯತೆ ಮತ್ತು ಪರಿಣತಿಗೆ ಒಂದು ಉದಾಹರಣೆಯಾಗಿದೆ. ಯುಎಇಯಲ್ಲಿನ ಐಐಟಿ ದೆಹಲಿ ಕ್ಯಾಂಪಸ್ ಭಾರತ ಮತ್ತು ಯುಎಇಯ ಸ್ನೇಹದ ಸೌಧವಾಗಲಿದೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ.
ಮುಂದಿನ ವರ್ಷ ಜನವರಿಯಿಂದ ಐಐಟಿ ದೆಹಲಿಯು, ಅಬುಧಾಬಿ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಿದ್ದು, ಸೆಪ್ಟೆಂಬರ್ 2024 ರಿಂದ ಪದವಿ ಕೋರ್ಸ್ ಗಳನ್ನು ಆರಂಭಿಸಲಿದೆ.