ನವದೆಹಲಿ: 'ಕಲಾಪದಲ್ಲಿ ಗದ್ದಲ ಸೃಷ್ಟಿಸುವುದನ್ನೇ ಪ್ರತಿಪಕ್ಷಗಳು ತಮ್ಮ ಬಂಡವಾಳ ಮಾಡಿಕೊಂಡಿವೆ' ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಟೀಕಿಸಿದ್ದಾರೆ.
ಭಾನುವಾರ ಇಲ್ಲಿ ನಡೆದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ನೂರನೇ ವರ್ಷದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸರ್ಕಾರದ ಸಾಧನೆಯನ್ನು ಪ್ರಶಂಸಿಸಿದರು.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳಿಂದಲೂ ವಿರೋಧ ಪಕ್ಷಗಳು ಅಧಿವೇಶನಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
'ಪ್ರಜಾಪ್ರಭುತ್ವದಲ್ಲಿ ಸಂವಾದ, ಚರ್ಚೆ ಹಾಗೂ ಸಮಾಲೋಚನೆ ನಡೆಯಬೇಕು. ಆದರೆ, ಸಂಸತ್‌ನಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿ ನಿರ್ಮಾಣವಾಗಿದೆ. ಜನತಂತ್ರದ ಮೌಲ್ಯಗಳಿಗೆ ಅಡ್ಡಿಪಡಿರುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ' ಎಂದು ಟೀಕಿಸಿದರು.
'ದಿನದ 24 ಗಂಟೆಗಳ ಕಾಲ ಜನರಿಗೆ ನ್ಯಾಯ ಒದಗಿಸುವುದು ಪ್ರಜಾಪ್ರಭುತ್ವವೆಂಬ ದೇಗುಲದ ಕರ್ತವ್ಯ. ಆದರೆ, ಅಲ್ಲಿ ಗದ್ದಲ, ಕೋಲಾಹಲ ಸೃಷ್ಟಿಸಲಾಗುತ್ತಿದೆ. ವಿರೋಧ ಪಕ್ಷಗಳು ರಾಜಕೀಯ ಸೇಡು ತೀರಿಸಿಕೊಳ್ಳಲು ಇಳಿದಿವೆ. ಚರ್ಚೆ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು' ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಗೆ ಗಮನ ಕೇಂದ್ರೀಕರಿಸಿದೆ. ಮಧ್ಯವರ್ತಿಗಳ ಪ್ರವೇಶಕ್ಕೆ ಕಡಿವಾಣ ಹಾಕುವ ಮೂಲಕ ಭ್ರಷ್ಟಾಚಾರದ ನಿರ್ಮೂಲನೆಗೆ ಒತ್ತು ನೀಡಿದೆ ಎಂದು ಶ್ಲಾಘಿಸಿದರು.