ಅಹಮದಾಬಾದ್: 2002ರ ಗೋದ್ರೋತ್ತರ ಗಲಭೆ ಪ್ರಕರಣ ಸಂಬಂಧ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು, ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಅಹಮದಾಬಾದ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾದೀಶ ಎ.ಆರ್.ಪಟೇಲ್ ಅವರು ತೀಸ್ತಾ ಮನವಿ ತಿರಸ್ಕರಿಸಿದ್ದಾರೆ.
ತೀಸ್ತಾ ಮನವಿಗೆ ಪ್ರತಿಯಾಗಿ ವಾದ ಮಂಡಿಸಿದ ಗುಜರಾತ್ ಸರ್ಕಾರದ ಪರ ವಕೀಲರು, 'ಗಲಭೆಯ ಸಂತ್ರಸ್ತರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡಿರುವ ಅವರು, ಮುಗ್ಧರನ್ನು ಸಿಕ್ಕಿಸಿದ್ದಾರೆ' ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತೀಸ್ತಾ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿತ್ತು. ತೀಸ್ತಾ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ, ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿತ್ತು.