ನವದೆಹಲಿ: ಭಾರತೀಯ ಸಂವಿಧಾನದ ಈಗಿನ ನಿಬಂಧನೆಗಳ ಪ್ರಕಾರ, ಪರಿಶಿಷ್ಟ ಜಾತಿಗಳ (ಎಸ್‌ಸಿ) ಉಪ ವರ್ಗೀಕರಣಕ್ಕೆ ಅನುಮತಿ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಲು ಸಂವಿಧಾನ ಅವಕಾಶ ನೀಡಿದೆಯೇ ಎಂದು ಬಿಜೆಪಿಯ ಜಿ.ವಿ.ಎಲ್.ನರಸಿಂಹ ರಾವ್ ಅವರು ಲೋಕಸಭೆಯಲ್ಲಿ ಬುಧವಾರ ಪ್ರಶ್ನೆ ಕೇಳಿದ್ದರು.
ಆಂಧ್ರ ಪ್ರದೇಶದ ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ವಿಷಯದ ಕುರಿತು ಪರಿಶೀಲನೆ ನಡೆಸಿದ್ದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು, ಇದಕ್ಕೆ ಅವಕಾಶ ಕಲ್ಪಿಸಲು ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ಮಾಡುವಂತೆ ಶಿಫಾರಸು ಮಾಡಿದೆ. ಆಯೋಗದ ಶಿಫಾರಸುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಮನವಿ ಸಲ್ಲಿಸಲಾಗಿದೆ. ಇಲ್ಲಿಯವರೆಗೆ 20 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆಗಳು ಬಂದಿವೆ. ಈ ಪೈಕಿ ಏಳು ರಾಜ್ಯಗಳು ಉಪ-ವರ್ಗೀಕರಣದ ಪರವಾಗಿವೆ. 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಇದಕ್ಕೆ ವಿರುದ್ಧವಾಗಿವೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಉಪ ವರ್ಗೀಕರಣದ ವಿಷಯವು ಸುಪ್ರೀಂ ಕೋರ್ಟ್‌ನ ಮುಂದೆ ಬಂದಿತ್ತು. ಈ ವಿಷಯವನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುವಂತೆ ಸಂವಿಧಾನ ಪೀಠವು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಈ ಹಿಂದೆಯೇ ಮನವಿ ಮಾಡಿದೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಎಡಗೈ-ಬಲಗೈ ಸಮುದಾಯದವರಿಗೆ ಒಳಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಕರ್ನಾಟಕದ ಬಿಜೆಪಿ ಸರ್ಕಾರವು ಮಾರ್ಚ್‌ನಲ್ಲಿ ಕೈಗೊಂಡಿತ್ತು. ಎಡಗೈ ಒಳಪಂಗಡಕ್ಕೆ ಶೇ 6, ಬಲಗೈಗೆ ಶೇ 5.5, ಲಂಬಾಣಿ, ಬೋವಿ, ಕೊರಮ, ಕೊರಚ ಒಳಪಂಗಡಗಳಿಗೆ ಶೇ 4.5 ಹಾಗೂ ಈ ಎಲ್ಲ ಗುಂಪಿಗೆ ಸೇರದ ಒಳಪಂಗಡಗಳಿಗೆ ಶೇ 1 ಮೀಸಲಾತಿ ಹಂಚಿಕೆ ಮಾಡಲಾಗಿತ್ತು.