ಮುಂಬೈ: 'ಶಿವಸೇನಾ ನನ್ನಜ್ಜನ ಸ್ವತ್ತು. ಅದನ್ನು ಕದಿಯಲು ಯಾರೊಬ್ಬರಿಗೂ ನಾನು ಅವಕಾಶ ನೀಡುವುದಿಲ್ಲ. ರಾಜಕೀಯ ಪಕ್ಷಗಳಿಗೆ ಚಿಹ್ನೆ ಹಂಚಿಕೆಯ ಅಧಿಕಾರವಷ್ಟೇ ಚುನಾವಣಾ ಆಯೋಗಕ್ಕಿದೆ. ಪಕ್ಷದ ಹೆಸರು ಬದಲಾಯಿಸುವ ಹಕ್ಕು ಅದಕ್ಕಿಲ್ಲ'
-ಹೀಗೆಂದು ಶಿವಸೇನಾ ಪಕ್ಷದ ಹೆಸರು ಮತ್ತು ಮೂಲ ಚಿಹ್ನೆಯಾದ 'ಬಿಲ್ಲು ಮತ್ತು ಬಾಣ'ದ ಗುರುತನ್ನು ದಕ್ಕಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಗುಡುಗಿದ್ದಾರೆ.
ವಿದರ್ಭ ಪ್ರವಾಸದ ಎರಡನೇ ದಿನವಾದ ಸೋಮವಾರ ಅಮರಾವತಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪಕ್ಷಕ್ಕೆ ಶಿವಸೇನಾ ಎಂದು ಹೆಸರಿಟ್ಟಿದ್ದು, ನನ್ನ ತಾತ ಕೇಶವ ಠಾಕ್ರೆ. ಅದರ ಕಳ್ಳತನಕ್ಕೆ ನಾನು ಬಿಡುವುದಿಲ್ಲ' ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
'ಪಕ್ಷಕ್ಕೆ ನನ್ನ ತಾತ ನಾಮಕರಣ ಮಾಡಿದ ಹೆಸರನ್ನು ಬದಲಾಯಿಸಲು ಆಯೋಗಕ್ಕೆ ಅಧಿಕಾರ ಇದೆಯೇ' ಎಂದು ಪ್ರಶ್ನಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗೂಡುವಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಇದನ್ನು ನಾನು ಪ್ರತಿಪಕ್ಷಗಳ ಒಗ್ಗಟ್ಟು ಎಂದು ಅರ್ಥೈಸುವುದಿಲ್ಲ. ನಾವೆಲ್ಲರೂ ದೇಶಭಕ್ತರು. ಜನತಂತ್ರ ವ್ಯವಸ್ಥೆಯ ರಕ್ಷಣೆಗಾಗಿ ಒಗ್ಗೂಡುತ್ತಿದ್ದೇವೆ. ಇದು ದೇಶವನ್ನು ಪ್ರೀತಿಸುವ ಜನರ ಒಗ್ಗಟ್ಟು' ಎಂದು ವಿಶ್ಲೇಷಿಸಿದರು.
ಉದ್ಧವ್ ಅವರು ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಸಹಕಾರದಡಿ ಮಹಾ ವಿಕಾಸ ಆಘಾಡಿ ಸರ್ಕಾರ ರಚಿಸಿದ್ದರು. ಕಳೆದ ವರ್ಷದ ಜೂನ್‌ನಲ್ಲಿ ಪಕ್ಷದಲ್ಲಿ ಬಂಡಾಯ ಬಾವುಟ ಹಾರಿಸಿದ್ದ ಶಿಂದೆ, ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಿದ್ದರು.
ಚುನಾವಣೆಯಲ್ಲಿ ಶಿವಸೇನಾ ಪಕ್ಷದ ಚಿಹ್ನೆಯಡಿ ಗೆದ್ದ ಅಭ್ಯರ್ಥಿಗಳ ಪೈಕಿ ಹೆಚ್ಚಿನವರು ಮುಖ್ಯಮಂತ್ರಿ ಶಿಂದೆ ಅವರನ್ನು ಬೆಂಬಲಿಸಿದ್ದರು. ಹಾಗಾಗಿ, ಕಳೆದ ಫೆಬ್ರುವರಿಯಲ್ಲಿ ಶಿಂದೆ ಬಣವನ್ನೇ ನಿಜವಾದ ಶಿವಸೇನಾ ಎಂದು ಚುನಾವಣಾ ಆಯೋಗ ಘೋಷಿಸಿತ್ತು. ಜೊತೆಗೆ, ಪಕ್ಷದ ಮೂಲ ಚಿಹ್ನೆಯನ್ನೂ ಅದೇ ಬಣಕ್ಕೆ ನೀಡಿತ್ತು.
ಉದ್ಧವ್ ಬಣಕ್ಕೆ ಶಿವಸೇನಾ(ಯುಬಿಟಿ) ಎಂಬ ಹೆಸರು ನೀಡಿ, 'ಪಂಜು' (ಉರಿಯುತ್ತಿರುವ ಟಾರ್ಚ್) ಚಿಹ್ನೆ ನೀಡಿತ್ತು.
ಬಿಜೆಪಿ ವಿರುದ್ಧ ವಾಗ್ದಾಳಿ: 'ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿಗೆ ವಿಶ್ವಾಸವಿಲ್ಲ. ಹಾಗಾಗಿಯೇ, ಪಕ್ಷಗಳ ವಿಭಜನೆಯಲ್ಲಿ ಮುಳುಗಿದೆ. ಮೋದಿ ಅವರನ್ನು ವಿಶ್ವದ ನಂಬರ್ ಒನ್ ಪ್ರಧಾನಿ ಎಂದು ಬಿಂಬಿಸುವ ಬಿಜೆಪಿಗೆ ಇದರ ಅಗತ್ಯವಿದೆಯೇ' ಎಂದು ಉದ್ಧವ್ ಪ್ರಶ್ನಿಸಿದ್ದಾರೆ.
ವಿಚಾರಣೆಗೆ 'ಸುಪ್ರೀಂ' ಅಸ್ತು
ಚುನಾವಣಾ ಆಯೋಗವು ಶಿಂದೆ ಬಣಕ್ಕೆ ಶಿವಸೇನಾ ಪಕ್ಷದ ಹೆಸರು ಮತ್ತು ಮೂಲ ಚಿಹ್ನೆ ನೀಡಿರುವುದಕ್ಕೆ ಆಕ್ಷೇಪಿಸಿ ಉದ್ಧವ್ ಠಾಕ್ರೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿದೆ.
ತ್ವರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಅಮಿತ್ ಆನಂದ್ ತಿವಾರಿ ಅವರು, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ವಿಭಾಗೀಯ ಪೀಠಕ್ಕೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, 'ಜುಲೈ 31ರಂದು ವಿಚಾರಣೆ ಆರಂಭಿಸಲಾಗುವುದು' ಎಂದು ತಿಳಿಸಿತು.
ಉದ್ಧವ್ ವಾದವೇನು?: ಶಿಂದೆ ಬಣದ ಶಾಸಕರ ಅನರ್ಹತೆ ಅರ್ಜಿ ಕುರಿತಂತೆ ಸ್ಪೀಕರ್ ಅವರೇ ನಿಗದಿತ ಅವಧಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ. ಹಾಗಾಗಿ, ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
'ಅಲ್ಲದೇ, ವಿಧಾನಸಭೆಗೆ ಚುನಾವಣೆ ಸನ್ನಿಹಿತವಾಗಿದೆ. ಹಾಗಾಗಿ, ಶಿಂಧೆ ಅವರು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ದುರ್ಬಳಕೆ ಮಾಡಿಕೊಳ್ಳಬಹುದು' ಎಂದು ಹೇಳಿದ್ದಾರೆ.