ಕಾಸರಗೋಡು: ತಲಪ್ಪಾಡಿಯಿಂದ ತಿರುವನಂತಪುರ ವರೆಗಿನ ರಾಷ್ಟ್ರೀಯ ಹೆದ್ದಾರಿ-66ರ ಷಟ್ಪಥ ಅಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಶೇ. 60ರಷ್ಟು ಕಾಮಗಾರಿ ಪೂರ್ತಿಗೊಂಡಿದೆ. ಕಾಸರಗೋಡು ನಗರದಲ್ಲಿ ಕರಂದಕ್ಕಾಡಿನಿಂದ ನುಳ್ಳಿಪ್ಪಾಡಿ ವರೆಗಿನ ಮೇಲ್ಸೇತುವೆ ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಕೇರಳದಲ್ಲಿ 2025ರ ವೇಳೆಗೆ ಷಟ್ಪಥ ಕಾಮಗಾರಿ ಪೂರ್ತಿಗೊಳ್ಳಲಿದೆ.
ಹೆದ್ದಾರಿ ಕಾಂಗಾರಿ ಪಊರ್ತಿಗೊಳ್ಳುತ್ತಿದ್ದಂತೆ ಕೇರಳಾದ್ಯಂತ ಹನ್ನೊಂದು ಟಾಲ್‍ಬೂತ್‍ಗಳೂ ಕಾರ್ಯಾಚರಿಸಲಿದೆ. ಪ್ರತಿ 50ರಿಂದ 60ಕಿ.ಮೀ. ವ್ಯಾಪ್ತಿಗೆ ಒಂದರಂತೆ ಟಾಲ್‍ಗೇಟ್ ಸ್ಥಾಪನೆಯಾಗಲಿದೆ. ಕಾಸರಗೋಡಿನ ತಲಪ್ಪಾಡಿಯಿಂದ ತಿರುವನಂತಪುರದ ಕಾರೋಡ್ ವರೆಗೆ ಷಟ್ಪಥ ಕಾಮಗಾರಿ ನಡೆಯಲಿದೆ. ಒಟ್ಟು 646ಕಿ.ಮೀ ಷಟ್ಪಥ ನಿರ್ಮಾಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಖುದ್ದಾಗಿ ಟಾಲ್ ಸಂಗ್ರಹ ಮಾಡಲಿದೆ. ನಿರ್ಮಾಣ ಖರ್ಚಿನ ಮೊತ್ತ ಕೈಸೇರಿದ ನಂತರ ಶೇ. 40 ಟಾಲ್ ಮೊತ್ತ ಕಡಿತಗೊಳಿಸುವ ಆಲೋಚನೆಯೂ ಪ್ರಾಧಿಕಾರಕ್ಕಿದೆ. ಒಟ್ಟು 20ರೀಚ್‍ಗಳ ಮೂಲಕ ನಿರ್ಮಾಣಕಾರ್ಯ ನಡೆಯುತ್ತಿದ್ದು, ಇದರಲ್ಲಿ ಎಂಟು ರೀಚ್‍ಗಳ ನಿರ್ಮಾಣ ಬಹುತೇಕ ಪೂರ್ತಿಗೊಂಡಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ ವಿವಿಧೆಡೆ ಅಂಡರ್ ಪಾಸ್ ನಿರ್ಮಿಸುವಂತೆ ಮತ್ತೆ ಆಗ್ರಹ ಕೇಳಿಬರಲಾರಂಭಿಸಿದೆ. ನಗರದ ಚೌಕಿ, ಅಡ್ಕತ್ತಬೈಲ್ ನಾಯಮರ್‍ಮೂಲೆ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಅಂಡರ್ ಪಾಸ್ ನಿರ್ಮಾಣದ ತುರ್ತು ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿದ್ದರೂ, ಹೆದ್ದಾರಿ ಪ್ರಾಧಿಕಾರ ಸೂಕ್ತ ಉತ್ತರ ನೀಡಿಲ್ಲ. ತಲಪ್ಪಾಡಿಯಿಂದ ನೀಲೇಶ್ವರ ವರೆಗೆ ಸರ್ವೇ ನಡೆಸುವ ಮಧ್ಯೆ ಅಂಡರ್‍ಪಾಸ್ ತುರ್ತಾಗಿ ನಿರ್ಮಿಸಬೇಕಾಗಿರುವ ಸ್ಥಳ ನಿಗದಿಪಡಿಸುವಲ್ಲಿ ನಮ್ಮ ಜನಪ್ರತಿನಿಧಿಗಳೂ ಪರಾಭವಗೊಂಡಿರುವುದು ಸಾಬೀತಾಗಿದೆ. ಹೆದ್ದಾರಿ ಷಟ್ಪಥ ಯೋಜನೆಯ ಆರಂಭಿಕ ಹಂತದಲ್ಲೇ ಈ ಕೆಲಸ ನಡೆಸಬೇಕಾಗಿದ್ದರೂ, ನಿರ್ಲಕ್ಷ್ಯ ಧೋರಣೆಯಿಂದ ಇಂದು ಜನತೆ ಸಂಕಷ್ಟ ಅನುಭವಿಸುವಂತಾಗಿದೆ.