ವಾರಾಣಸಿ : ಇಲ್ಲಿನ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಅಸ್ತಿತ್ವ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ವಾರಾಣಾಸಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಈ ಕುರಿತು ಮಾಹಿತಿ ನೀಡಿದ ಜ್ಞಾನವ್ಯಾಪಿ ಮತ್ತು ಆದಿವಿಶ್ವೇಶ್ವರ ಪ್ರಕರಣಗಳ ಪರ ವಿಶೇಷ ವಕೀಲ ರಾಜೇಶ್ ಮಿಶ್ರಾ, 'ಸದ್ಯ ಪ್ರವೇಶ ನಿರ್ಬಂಧಿಸಲಾಗಿರುವ ವಝೂಖಾನಾದಲ್ಲಿದೆ ಎನ್ನಲಾದ ಶಿವಲಿಂಗವನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ವೈಜ್ಞಾನಿಕ ಸರ್ವೆ ನಡೆಸುವಂತೆ ಆದೇಶದಲ್ಲಿ ಹೇಳಲಾಗಿದೆ' ಎಂದು ತಿಳಿಸಿದ್ದಾರೆ.
'ಮಂದಿರ ಇರುವ ಜಾಗದಲ್ಲಿ ಮಸೀದಿ ಕಟ್ಟಲಾಗಿದ್ದು ಈ ಕುರಿತು ವೈಜ್ಞಾನಿಕ ಸರ್ವೆ ನಡೆಸಬೇಕು' ಎಂದು ಹಿಂದೂ ಭಕ್ತರ ಪರವಾಗಿ ಎ.ಕೆ.ವಿಶ್ವೇಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಇದಕ್ಕೂ ಮೊದಲು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ವಾದ ಹಾಗೂ ಪ್ರತಿವಾದವನ್ನು ನ್ಯಾಯಾಲಯ ಆಲಿಸಿತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಇಲ್ಲಿನ ಕಾಶಿ ದೇಗುಲದ ಸಂಕೀರ್ಣದಲ್ಲಿ ಇರುವ ಜ್ಞಾನವಾಪಿ ಮಸೀದಿಯ ಸಂಪೂರ್ಣ ಸರ್ವೆ ನಡೆಸಬೇಕು ಎಂದು ಹಿಂದೂ ಭಕ್ತರ ಪರ ವಕೀಲರು ಒತ್ತಾಯಿಸಿದ್ದರು.
ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸಿದಲ್ಲಿ ಕಟ್ಟಡಕ್ಕೆ ಹಾನಿಯಾಗಲಿದೆ ಎಂದು ಮುಸ್ಲಿಮರ ಪರ ವಕೀಲರು ವಾದ ಮಂಡಿಸಿದರು.
ಎರಡೂ ಕಡೆ ವಾದ ಆಲಿಸಿದ ನ್ಯಾಯಾಧೀಶರು, ವೈಜ್ಞಾನಿಕ ಸರ್ವೆಗೆ ಆದೇಶಿಸಿದರು.