ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಬೆಳಗಾವಿ ಬೈಲಹೊಂಗಲದ ಅಕ್ಕಮಹಾದೇವಿ ವಿಮೆನ್ಸ್ ಏಂಡ್ ಕಾಮರ್ಸ್ ಪದವಿ ಕಾಲೇಜು ಸಹಕಾರದೊಂದಿಗೆ ಎರಡು ದಿವಸಗಳ ರಂಗ ರಸಗ್ರಾಹಿ ಶಿಬಿರ ಕಾಲೇಜು ಸಭಾಂಗಣದಲ್ಲಿ ಜರುಗಿತು.
ಬೇವಿನಕೊಪ್ಪ ಆನಂದಾಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಒರೆಗೆ ಹಚ್ಚಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ರಂಗ ಸಂಸ್ಥೆಗಳು ನಡೆಸಬೇಕು. ಈ ಮೂಲಕ ರಂಗಕಲಾವಿದರನ್ನು ಬೆಳೆಸಲು ಸಾಧ್ಯ. ಈ ಕೆಲಸವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರ ಶ್ರಮ ಶ್ಲಾಘನೀಯ ಎಂದು ತಿಳಿಸಿದರು. ಕಾಲೇಜು ಪ್ರಾಂಶುಪಾಲ ಗಣಾಧಾರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹಲವಾರು ಪ್ರತಿಭೆಗಳಿದ್ದು, ರಂಗಚಿನ್ನಾರಿ ಕಲ್ಪಿಸಿರುವ ಅವಕಾಶಗಳಿಂದ ಇವರ ರಂಗಕನಸು ಸಾಕಾರಗೊಳ್ಳಲು ಸಾಧ್ಯ ಎಂದು ತಿಳಿಸಿದರು. ಕಾಸರಗೋಡು ಚಿನ್ನಾ ಮಾತನಾಡಿ, ನನ್ನ ಪ್ರೀತಿಯ ಕ್ಷೇತ್ರಗಳಲ್ಲಿ ಒಂದಾದ ರಂಗಭೂಮಿ ವಿಪುಲ ಅವಕಾಶಗಳೊಂದಿಗೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು, ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಶ್ರಮವಹಿಸುತ್ತಿರುವುದಾಗಿ ತಿಳಿಸಿದರು.
ಶಿಬಿರದಲ್ಲಿ 175ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಚಲನಚಿತ್ರ ನಟ, ನಿರ್ದೇಶಕ ಪ್ರಕಾಶ್ ನೊಸ್ನವರ್ಕರ್ ಮುಖ್ಯ ಅತಿಥಿಯಾಘಿ ಭಾಗವಹಿಸಿದ್ದರು. ರಂಗನಟ, ನಿರ್ದೇಶಕ ಅರುಣ್‍ಪ್ರಕಾಶ್ ನಾಯಕ್, ಕಾಶೀನಾಥ್ ಬಿರಾದಾರ್, ಎಂ.ಎಚ್. ಪೇಂಟೆಲ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನುರಾಧಾ ಯಮನಪ್ಪನವರ್ ಸ್ವಾಗತಿಸಿದರು. ಚಿತ್ರನಟ, ಶಿಬಿರ ನಿರ್ದೇಶಕ ಕಾಸರಗೋಡು ಚಿನ್ನಾ ವರನ್ನು ಕಾಲೇಝಿನ ಪರವಾಗಿ ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.