ವಾಷಿಂಗ್ಟನ್: ಸೂರ್ಯನ ಪ್ರಖರತೆ ಇನ್ನೆರಡು ವರ್ಷದಲ್ಲಿ ಗರಿಷ್ಠ ಮಟ್ಟ ತಲುಪಲಿದ್ದು, ಇದರಿಂದ ಸೌರ ಮಾರುತ ಪ್ರಬಲವಾಗುವ ಕಾರಣ ಭೂಮಿಯ ಮೇಲಿನ ಎಲ್ಲ ವಿಧದ ಸಂವಹನ ಸಾಧನಗಳು ನಾಶವಾಗುವ ಸಾಧ್ಯತೆ ಇದೆ. 2025ರಲ್ಲಿ ಸೌರ ಮಂಡಲದಲ್ಲಾಗುವ ಈ ಬೆಳವಣಿಗೆ ಭೂಮಿ ಮೇಲಿನ ಡಿಜಿಟಲ್ ಜಗತ್ತು ಸಿದ್ಧವಾಗದ ಕಾರಣ 'ಇಂಟರ್ನೆಟ್ ಅಪೋಕ್ಯಾಲಿಪ್ಸ್' ಪರಿಣಾಮ ಉಂಟಾಗುವ ಸಂಭವ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಎಚ್ಚರಿಕೆ ನೀಡಿದೆ.
ಸೌರ ಮಾರುತದ ಹೊಡೆತದಿಂದ ಇಂಟರ್ನೆಟ್ ವ್ಯವಸ್ಥೆಯೇ ಕುಸಿಯುವ ಸಂಭವನೀಯತೆ ಬಗ್ಗೆ ನಾಸಾ ಯಾವುದೇ ಟಿಪ್ಪಣಿ ಮಾಡಿಲ್ಲವಾದರೂ ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ಚರ್ಚೆ ಶುರುವಾಗಿದ್ದು, ಬಳಕೆದಾರರಲ್ಲಿ ಕಳವಳ ಹೆಚ್ಚಿಸಿದೆ ಎಂದು 'ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ. ಇಂಥ ಬೆಳವಣಿಗೆ ಸಂಭವಿಸಿದರೆ ಆನ್ಲೈನ್ಗೆ ಆತುಕೊಂಡಿರುವ ಜನರ ಪಾಡೇನು? ಎಂದು ಕೆಲವರು ಸಾಮಾಜಿಕ ಜಾಲತಾಣದ ಗೀಳಿನವರ ಕಾಲೆಳೆದಿದ್ದಾರೆ. ಇನ್ನು ಕೆಲವು ಮಂದಿ, ಇಂಥದಲ್ಲಾ ಪ್ರಚಾರಕ್ಕಾಗಿ ಮಾಡುವ ಕಿತಾಪತಿ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು ಇದು ಸಂಪೂರ್ಣವಾಗಿ ಕಾಲ್ಪನಿಕವೂ ಅಲ್ಲ ಎಂದಿದ್ದಾರೆ.
ಸಂಭವನೀಯ ಪ್ರಬಲ ಸೌರ ಮಾರುತದಿಂದ ಸಮುದ್ರದೊಳಗಿನ ಸಂವಹನ ಕೇಬಲ್ ಜಾಲಕ್ಕೆ ದೊಡ್ಡ ಆಪತ್ತು ಉಂಟಾಗಬಹುದು. ಇದರಿಂದ ಬಹುದೂರದ ಸಂವಹನಗಳು ತಿಂಗಳುಗಟ್ಟಲೆ ಸಾಧ್ಯವಾಗದೆ ಇರುವ ಸಾಧ್ಯತೆ ಇದೆ. ಈ ರೀತಿ ಸಂವಹನ ವೈಫಲ್ಯ ಒಂದು ದಿನದ ಮಟ್ಟಿಗೆ ಘಟಿಸಿದರೆ ಅಮೆರಿಕದಲ್ಲಿ 11 ಶತಕೋಟಿ ಡಾಲರ್ಗೂ ಹೆಚ್ಚು ಮೊತ್ತದ ಆರ್ಥಿಕ ಚಟುವಟಿಕೆಗೆ ಬಾಧೆ ಆಗುತ್ತದೆ.
- ಸಂಗೀತಾ ಅಬ್ದು ಜ್ಯೋತಿ, ಕ್ಯಾಲಿಫೋನಿರ್ಯಾ ವಿವಿ ವಿಜ್ಞಾನ ವಿಭಾಗದ ಪ್ರೊಫೆಸರ್
1859ರಲ್ಲಿ ಸಂಭವಿಸಿತ್ತು..
ಈ ಹಿಂದೆ ಕೂಡ ಪ್ರಬಲ ಸೌರ ಮಾರುತಗಳು ಭೂಮಿಗೆ ಅಪ್ಪಳಿಸಿವೆ. ಆದರೆ ಆ ಸಮಯದಲ್ಲಿ ಭೂಮಂಡಲದಲ್ಲಿ ಇನ್ನೂ ಇಂಟರ್ನೆಟ್ ಬಳಕೆಯಲ್ಲಿ ಇರಲಿಲ್ಲ. 1859ರಲ್ಲಿ ಸಂಭವಿಸಿದ 'ಕ್ಯಾರಿಂಗ್ಟನ್ ಈವೆಂಟ್'ನಿಂದ ಆಗ ಬಳಕೆಯಲ್ಲಿದ್ದ ಟೆಲಿಗ್ರಾಫ್ ಮಾರ್ಗದಲ್ಲಿ ವಿದ್ಯುತ್ ಕಿಡಿ ಕಾಣಿಸಿಕೊಂಡಿತ್ತು ಮತ್ತು ಹಲವಾರು ಲೈನ್ವೆುನ್ಗಳು ವಿದ್ಯುತ್ ಸ್ಪರ್ಶದ ಆಘಾತಕ್ಕೆ ಒಳಗಾಗಿದ್ದರು. 1989ರಲ್ಲಿ ಬೀಸಿದ ಸೌರ ಮಾರುತದಿಂದ ವಿದ್ಯುತ್ ಗ್ರಿಡ್ಗಳಲ್ಲಿ ತಾಸಿನ ಕಾಲ ಆಗಾಧ ಶಕ್ತಿ ಸಂಚಾರ ಆಗಿತ್ತು. ಆಧುನಿಕ ಜಗತ್ತಿನಲ್ಲಿ ಸೌರ ಮಾರುತದ ಅನುಭವ ಹೆಚ್ಚಿನ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಇದರ ಪರಿಣಾಮ ಏನು ಎಂಬುದನ್ನು ನಿಖರವಾಗಿ ಆಂದಾಜಿಸುವುದು ಕಷ್ಟ ಎಂದು ಕ್ಯಾಲಿಫೋನಿರ್ಯಾ ವಿವಿ ವಿಜ್ಞಾನ ವಿಭಾಗದ ಪ್ರೊಫೆಸರ್ ಸಂಗೀತಾ ಅಬ್ದು ಜ್ಯೋತಿ ಅಭಿಪ್ರಾಯಪಟ್ಟಿದ್ದಾರೆ. 'ಸೋಲಾರ್ ಸೂಪರ್ಸ್ಟಾಮ್್ಸರ್ ಪ್ಲಾಯನಿಂಗ್ ಫಾರ್ ಆನ್ ಇಂಟರ್ನೆಟ್ ಅಪೋಕ್ಯಾಲಿಪ್ಸ್' ಎಂಬ ಸಂಶೋಧನಾ ವರದಿಯನ್ನು ಮಂಡಿಸಿದ್ದಾರೆ.