ಕಾಸರಗೋಡು: ಸಂಚರಿಸುತ್ತಿದ್ದ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಹೊಸದುರ್ಗ ಮಡಿಕೈ ನಿವಾಸಿ, ಮಂಗಳೂರಿನ ಖಾಸಗಿ ಕಾಲೇಜೊಂದರ ಹೋಟೆಲ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿ ಅಭಿರಾಮ್(19)ಗಾಯಗೊಂಡಿದ್ದಾರೆ.
ಚೆನ್ನೈ-ಮಂಗಳೂರು ಮೈಲ್ ರೈಲುಗಾಡಿಯಲ್ಲಿ ಹೊಸದುರ್ಗದಿಂದ ಮಂಗಳೂರು ಕಾಲೇಜಿಗೆ ತೆರಳುವ ಮಧ್ಯೆ ಕೋಟಿಕುಳಂ ಸನಿಹ ಕಲ್ಲು ತೂರಾಟ ನಡೆದಿದೆ. ಗಾಯಾಳು ಅಭಿರಾಮ್ ಅವರಿಗೆ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕಾಸರಗೋಡು ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಜೇಶ್ವರದಿಂದ ಕಣ್ಣೂರು ವರೆಗೆ ರೈಲಿಗೆ ಕಲ್ಲು ತೂರಾಟ ನಡೆಯುವ ಕಿಡಿಗೇಡಿ ಕೃತ್ಯ ಮರುಕಳಿಸುತ್ತಿದ್ದು, ಆರೋಪಿಗಳ ಪತ್ತೆಕಾರ್ಯ ಸಾಧ್ಯವಾಗದಿರುವುದು ಪ್ರಕರಣ ಹೆಚ್ಚಲು ಕಾರಣವಾಗುತ್ತಿದೆ.