ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶೈಕ್ಷಣಿಕ ವರ್ಷದ ಶಾಲಾ ಪಾರ್ಲಿಮೆಂಟ್ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿ ನಡೆಸಲಾಯಿತು. ಚುನಾವಣೆಯ ವಿವಿಧ ಆಯಾಮಗಳಾದ ನಾಮ ಪತ್ರ ಸಲ್ಲಿಕೆ, ಹಿಂತೆಗೆತ, ಚಿಹ್ನೆ ಆಯ್ಕೆ, ಬಹಿರಂಗ ಪ್ರಚಾರ ಇವುಗಳನ್ನೆಲ್ಲ ಕಾರ್ಯರೂಪಕ್ಕೆ ತಂದಿದ್ದಲ್ಲದೆ ಚುನಾವಣಾ ದಿನದಂದು ಮಾದರಿ ಮತಗಟ್ಟೆಯನ್ನೂ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸಾಲಲ್ಲಿ ಬಂದು ತಮ್ಮ ಸರದಿ ಬಂದಾಗ ಸಹಿ ಹಾಕಿ , ಕೈಗೆ ಗುರುತು ಹಾಕಿಸಿ ಮತ ಚಲಾಯಿಸಿದರು. ಮತ ಚಲಾಯಿಸಲು ಹೊಸ ತಂತ್ರಜ್ಞಾನ ಇವಿಯಂ ಆಪ್‍ನ್ನು ಬಳಸಲಾಯಿತು. ಶಾಲಾ ನಾಯಕಿಯಾಗಿ ಹತ್ತನೆಯ ತರಗತಿಯ ಕು. ಪೂಜಶ್ರೀ ಆಯ್ಕೆಯಾದರೆ, ಮಾ.ಬ್ರಿಜೇಶ್ ಮೋಹನ್ ಉಪನಾಯಕನಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ತರಗತಿ ನಾಯಕರ ಚುನಾವಣೆಯನ್ನು ಆಯಾ ತರಗತಿಗಳಲ್ಲಿ ನಡೆಸಲಾಯಿತು. ಸಮಾಜ ವಿಜ್ಞಾನ ಶಿಕ್ಷಕಿ ವಿದ್ಯಾ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದರು.