ಕೋಲ್ಕತ್ತ: ಚಿಕಿತ್ಸೆಗೆ ನೀಡುವ ಅನುದಾನ ಲಭ್ಯವಿರದ ಕಾರಣ, ಲೈಸೊಸೋಮಲ್ ಸ್ಟೋರೇಜ್ ಡಿಸಾರ್ಡರ್' (ಎಲ್‌ಎಸ್‌ಡಿ) ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಪಶ್ಚಿಮ ಬಂಗಾಳದ ನಾಲ್ಕು ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ.
ಹಣಕಾಸು ನೆರವು ಸ್ಥಗಿತಗೊಂಡು ಚಿಕಿತ್ಸೆ ಸಿಗದಿದ್ದರೆ ತಮ್ಮ ಕುಡಿಗಳ ಜೀವಕ್ಕೆ ಅಪಾಯ ಬಂದೊಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಮಕ್ಕಳ ಪಾಲಕರು, ನೀಡುವ ಚಿಕಿತ್ಸೆಯನ್ನು ಮುಂದುವರಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪಾಲಕರು ಕೋಲ್ಕತ್ತದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಎಸ್.ಎಸ್.ಕೆ.ಎಂ ಆಸ್ಪತ್ರೆಯ ನಿರ್ದೇಶಕರಾದ ಡಾ.ಮಣಿಮೋಯ್ ಬಂದೋಪಾಧ್ಯಾಯ ಅವರಿಗೆ ಪತ್ರ ಬರೆದಿದ್ದಾರೆ.
'ಎಲ್‌ಎಸ್‌ಡಿ'ಯಿಂದ ಬಳಲುತ್ತಿರುವ ಅದ್ರಿಜಾ ಮುಡಿ ಎಂಬ ಮಗುವಿನ ತಂದೆ ಜಯಂತ್ ಮುಡಿ, ವಿಶ್ವಜಿತ್ ಮಂಡಲ್ (ಅರಿಜಿತ್ ಮಂಡಲ್ ತಂದೆ), ಮುಖ್ತಾರ್ ಅಲಿ (ಮೌಜುಫ್ ಅಲಿ ತಂದೆ) ಹಾಗೂ ಇಮ್ರಾನ್ ಘೋಷಿ ತಂದೆ ಇಮ್ತಿಯಾಜ್ ಘೋಷಿ ಎಂಬುವವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
'ಕಲ್ಕತ್ತ ಹೈಕೋರ್ಟ್ ಆದೇಶದಂತೆ ಈ ನಾಲ್ಕು ಮಕ್ಕಳಿಗೆ ಕಳೆದ ವರ್ಷ ಫೆಬ್ರುವರಿ 3ರಂದು ಚಿಕಿತ್ಸೆ ಆರಂಭಿಸಲಾಯಿತು. ಮೂವರು ಮಕ್ಕಳಿಗೆ ಕಳೆದ ವರ್ಷದ ಫೆಬ್ರುವರಿ 17ರಂದು ಇಂಜೆಕ್ಷನ್‌ಗಳನ್ನು (ಇಮಿಗ್ಲುಸರೇಸ್ ಮತ್ತು ಲ್ಯಾರೊನಿಡೇಸ್) ನೀಡಲು ಆರಂಭಿಸಲಾಯಿತು. ಅದ್ರಿಜಾಗೆ ಕಳೆದ ವರ್ಷ ಮಾರ್ಚ್‌ನಲ್ಲಿ ಈ ಇಂಜೆಕ್ಷನ್ ನೀಡುವುದನ್ನು ಆರಂಭಿಸಲಾಯಿತು'
'ಈ ಚಿಕಿತ್ಸೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ನೀಡುತ್ತಿದ್ದ ₹ 50 ಲಕ್ಷ ಸೇರಿದಂತೆ ಒಟ್ಟಾರೆ ಅನುದಾನ ಸಿಗುತ್ತಿಲ್ಲ ಎಂದು ತಿಳಿಸಿರುವ ಕೋಲ್ಕತ್ತದ ಎಸ್‌ಎಸ್‌ಕೆಎಂ ಆಸ್ಪತ್ರೆ, ಚಿಕಿತ್ಸೆಯನ್ನು ನಿಲ್ಲಿಸಿದೆ. ಮಕ್ಕಳನ್ನು ಈಗ ಕೋಲ್ಕತ್ತ ಪೊಲೀಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ' ಎಂದು ಪತ್ರದಲ್ಲಿ ಪಾಲಕರು ವಿವರಿಸಿದ್ದಾರೆ.
'ಈ ಚಿಕಿತ್ಸೆಯನ್ನು ನಿಲ್ಲಿಸಿದಲ್ಲಿ ಮಕ್ಕಳ ಜೀವಕ್ಕೆ ಅಪಾಯ ಬಂದೊಗಲಿದೆ. ಕಳೆದ ಒಂದು ವರ್ಷದಿಂದ ಚಿಕಿತ್ಸೆ ನೀಡಿರುವುದೂ ವ್ಯರ್ಥವಾಗಲಿದೆ. ಹೀಗಾಗಿ, ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲು ಕ್ರಮ ಕೈಗೊಳ್ಳಬೇಕು' ಎಂದು ಪಾಲಕರು ಮನವಿ ಮಾಡಿದ್ದಾರೆ.
ಏನಿದು 'ಎಲ್‌ಎಸ್‌ಡಿ' :
ದೇಹದಲ್ಲಿ ವಿವಿಧ ಬಗೆಯ ಕಿಣ್ವಗಳನ್ನು ಹೊಂದಿರುವ ಲೈಸೊಸೋಮ್ ಗಳ ಕೊರತೆ ಉಂಟಾದಾಗ ಕಾಣಿಸಿಕೊಳ್ಳುವ ತೊಂದರೆಯೇ 'ಲೈಸೊಸೋಮಲ್ ಸ್ಟೋರೇಜ್ ಡಿಸಾರ್ಡರ್'. ಜೀವಕೋಶದಲ್ಲಿ ಪ್ರೋಟಿನ್ ಕಾರ್ಬೊಹೈಡ್ರೇಟ್‌ಗಳನ್ನು ವಿಭಜಿಸುವಲ್ಲಿ ಈ ಲೈಸೊಸೋಮ್‌ಗಳ ಪಾತ್ರ ದೊಡ್ಡದು. ಸತ್ತ ಜೀವಕೋಶಗಳನ್ನು ದೇಹದಿಂದ ಹೊರಹಾಕುವುದು ಜೀವಕೋಶಗಳ ಭಿತ್ತಿಯ ದುರಸ್ತಿ ಮಾಡುವ ಇವು ಬ್ಯಾಕ್ವೀರಿಯಾಗಳು ವೈರಸ್‌ಗಳ ವಿರುದ್ಧದ ಹೋರಾಟದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತವೆ. ಲೈಸೊಸೋಮ್ ಕೊರತೆಯು ದೇಹದ ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗುತ್ತದೆ. ಇವುಗಳ ಕೊರತೆಯಿಂದಾಗಿ 50ಕ್ಕೂ ಹೆಚ್ಚು ಬಗೆಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಎಲ್‌ಎಸ್‌ಡಿ ಚಿಕಿತ್ಸೆ ದುಬಾರಿಯಾದುದು.