ಬೆಂಗಳೂರು : 'ಚಂದ್ರಯಾನ-3'ರ ಯಶಸ್ವಿ ಉಡ್ಡಯನದಿಂದ ಬೀಗುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ), ಮಾನವಸಹಿತ ಚೊಚ್ಚಲ ಗಗನಯಾನಕ್ಕೂ ಭರದ ಸಿದ್ಧತೆ ನಡೆಸಿದೆ.
ಗಗನಯಾನ ಮುಗಿಸಿ ಭೂಮಿಗೆ ಮರಳುವ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ನಿಗದಿತ ಪ್ರದೇಶಕ್ಕೆ ಕರೆತರುವ ಬಗ್ಗೆ ಭಾರತೀಯ ನೌಕಾಪಡೆ ಮತ್ತು ಇಸ್ರೊ ಜಂಟಿಯಾಗಿ ಪರೀಕ್ಷಾರ್ಥ ಪ್ರಯೋಗಗಳಲ್ಲಿ ಮುಳುಗಿವೆ.
ಆಂಧ್ರಪ್ರದೇಶದ ವಿಶಾಖಪಟ್ಟಣ ಪೂರ್ವ ಭಾಗದ ನೌಕಾ ನೆಲೆಯಲ್ಲಿ ಇತ್ತೀಚೆಗೆ ದ್ವಿತೀಯ ಹಂತದ ಪರೀಕ್ಷೆಯೂ ಯಶಸ್ವಿಯಾಗಿ ಮುಗಿದಿದೆ.
ಗಗನಯಾನಿಗಳನ್ನು ಹೊತ್ತೊಯ್ಯುವ ಕೃತಕ ಮ್ಯಾಡ್ಯೂಲ್ ಅನ್ನು ಸಮುದ್ರದಲ್ಲಿ ಇಳಿಸಲಾಯಿತು. ಬಳಿಕ ಅದನ್ನು ಸುರಕ್ಷಿತವಾಗಿ ನಿರ್ದಿಷ್ಟ ಸ್ಥಳಕ್ಕೆ ತರುವ ಬಗ್ಗೆ ತಾಲೀಮು ನಡೆಯಿತು. ಇದರಲ್ಲಿ ಚಾಲಕರು, ನೌಕಾಪಡೆ ಕಮಾಂಡೊಗಳು, ವೈದ್ಯಕೀಯ ತಜ್ಞರು, ಸಂವಹನಕಾರರು, ತಂತ್ರಜ್ಞರು ಪಾಲ್ಗೊಂಡಿದ್ದರು ಎಂದು ಇಸ್ರೊ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಸಮುದ್ರದಲ್ಲಿ ಕೃತಕ ಮ್ಯಾಡ್ಯೂಲ್ ಅನ್ನು ತೇಲಾಡುವ ಸ್ಥಿತಿಯಲ್ಲಿಡಲಾಯಿತು. ಬಳಿಕ ಅದನ್ನು ನಿಗದಿತ ಪ್ರದೇಶದಲ್ಲಿದ್ದ ಹಡಗಿನ ಮೇಲಕ್ಕೆ ತರಲಾಯಿತು. ಮ್ಯಾಡ್ಯೂಲ್ ನೀರಿಗೆ ಬಿದ್ದ ತಕ್ಷಣವೇ ಅದನ್ನು ಹೇಗೆ ಹೊರಗೆ ತರಬೇಕು ಎಂಬ ಬಗ್ಗೆ ರಕ್ಷಣಾ ತಂಡದ ಸದಸ್ಯರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂದಿನ ವರ್ಷ ಗಗನಯಾನ ನೌಕೆಯ ಉಡ್ಡಯನಕ್ಕೆ ಇಸ್ರೊ ತಯಾರಿ ನಡೆಸಿದೆ.
ಭೂಮಿಯಿಂದ 400 ಕಿ.ಮೀ ಕೆಳಕಕ್ಷೆಗೆ ಮೂವರು ಗಗನಯಾತ್ರಿಗಳನ್ನು ಹೊತ್ತ ನೌಕೆ ಕಳುಹಿಸಲಾಗುತ್ತದೆ. ಈ ನೌಕೆಯು ಭೂಕಕ್ಷೆಯಲ್ಲಿ ಮೂರು ದಿನಗಳ ಕಾಲ ಪರಿಭ್ರಮಿಸಲಿದೆ. ಬಳಿಕ ಅದನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲಾಗುತ್ತದೆ. ಇದನ್ನು ಸಮುದ್ರದ ಮೇಲೆ ಸುರಕ್ಷಿತವಾಗಿ ಇಳಿಸುವ ಸಂಬಂಧ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿವೆ.