ಶಿಮ್ಲಾ : ಜಿಲ್ಲೆಯ ರೊಹ್ರು ಪ್ರದೇಶದ ಬದಿಯಾರಾ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಉಂಟಾದ ಹಠಾತ್ ಪ್ರವಾಹದಲ್ಲಿ ಡಾಬಾವೊಂದು ಕೊಚ್ಚಿಕೊಂಡು ಹೋಗಿದೆ. ವೃದ್ಧ ದಂಪತಿ ಹಾಗೂ ಅವರ ಮೊಮ್ಮಗ ಕೂಡ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಇಲ್ಲಿನ ಲೈಲಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾದ್ದರಿಂದ ಈ ಘಟನೆ ನಡೆದಿದ್ದು, ಮೂವರನ್ನು ಪತ್ತೆ ಹಚ್ಚಲು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ರೊಹ್ರುನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಕೋಟಖಾಯ್ ತಾಲ್ಲೂಕಿನ ಖಾಲ್ಟು ನುಲ್ಲಾ ಪ್ರದೇಶದ ಮಾರುಕಟ್ಟೆ ರಸ್ತೆಯಲ್ಲಿ ಒಂದು ಮೀಟರ್ ಆಳದ ಬಿರುಕು ಕಾಣಿಸಿಕೊಂಡಿದೆ. ಇದರಿಂದಾಗಿ ಮಾರುಕಟ್ಟೆ ಪ್ರದೇಶವು ಎರಡು ಭಾಗಗಳಾಗಿ ವಿಂಗಡಣೆಯಾಗಿದೆ ಎಂದು ಶಿಮ್ಲಾದ ಜಿಲ್ಲಾಧಿಕಾರಿ ಆದಿತ್ಯ ನೇಗಿ 'ಪಿಟಿಐ'ಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆಯಿಂದ ನಿರಂತರ ಮಳೆಯಾಗುತ್ತಿದ್ದು, ಈ ಪ್ರದೇಶದಲ್ಲಿ ಮೂರು ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಕೋಟಖಾಯ್‌ನ ಮುಖ್ಯ ಬಸ್‌ನಿಲ್ದಾಣದ ತಡೆಗೋಡೆಯು ಕುಸಿದುಬಿದ್ದಿದೆ. ಸ್ಥಳೀಯ ಪೊಲೀಸ್ ಠಾಣೆಯ ಎದುರಿನಲ್ಲಿ ಭೂಕುಸಿತವುಂಟಾಗಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಎಡಿಜಿಪಿ ಸಾವಂತ್ ಅತ್ವಾಲ್ ಟ್ವೀಟ್ ಮಾಡಿದ್ದಾರೆ.
ಶಿಮ್ಲಾದಲ್ಲಿ ಈಗ ಸೇಬು ಬೆಳೆಯ ಹಂಗಾಮು ಆರಂಭವಾಗಲಿದ್ದು, ಇಲ್ಲಿನ ಖಾಲ್ತುನುಲ್ಲಾ ಮಾರುಕಟ್ಟೆಗೆ ಹೊಂದಿರುವ ಗ್ರಾಮಗಳ ಸೇಬು ಬೆಳೆಗಾರರಿಗೆ ಮಳೆ ಚಿಂತೆಗೀಡು ಮಾಡಿದೆ. ಮಾರುಕಟ್ಟೆ ಪ್ರದೇಶದಲ್ಲಾಗಿರುವ ಭೂಕುಸಿತವು ಶಿಮ್ಲಾ ಮತ್ತು ರಾಜ್ಯದ ಇತರ ಪ್ರಮುಖ ಮಾರುಕಟ್ಟೆಗೆ ಸರಕು ಸಾಗಿಸಲು ಅಡ್ಡಿಯಾಗುವ ಭೀತಿ ಆವರಿಸಿದೆ.
ರಾಜ್ಯದಲ್ಲಿ ಜೂನ್ 24ರಿಂದ ಮಳೆ ಆರಂಭವಾಗಿದ್ದು ಇದುವರೆಗೆ ಮಳೆಸಂಬಂಧಿದ ಅವಘಡಗಳಲ್ಲಿ ಸುಮಾರು 138 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ ₹ 4,986 ಕೋಟಿ ನಷ್ಟವುಂಟಾಗಿದೆ. ಮಳೆಯಿಂದಾಗಿ ರಾಜ್ಯದಲ್ಲಿ 656 ರಸ್ತೆಗಳನ್ನು ಬಂದ್ ಮಾಡಲಾಗಿದೆ. 1,673 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿದ್ದು, 376 ಸ್ಥಳಗಳಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ: ಹಿಮಾಚಲಪ್ರದೇಶದಲ್ಲಿ ಮಳೆಪೀಡಿತ ಜನರ ಸಂಕಷ್ಟಕ್ಕೆ ನೆರವಾಗಲು ವಿಪತ್ತು ನಿರ್ವಹಣಾ ನಿಧಿಯಲ್ಲಿ ಬಾಕಿ ಉಳಿದಿರುವ ರಾಜ್ಯದ ಪಾಲಿನ ₹ 315 ಕೋಟಿಯನ್ನು ಕೇಂದ್ರ ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು ಶನಿವಾರ ಒತ್ತಾಯಿಸಿದ್ದಾರೆ.
ಶಿಮ್ಲಾದ ಕೋಟಖಾಯ್ ಪ್ರದೇಶದಲ್ಲಿ ಮಳೆಯಿಂದಾಗಿ ಶನಿವಾರ ರಸ್ತೆಗಳು ಬಿರುಕು ಬಿಟ್ಟಿವೆ -ಪಿಟಿಐ ಚಿತ್ರ