ನವದೆಹಲಿ: ವಿಚಾರಣೆ ನಡೆಸದೆ ಅಥವಾ ನ್ಯಾಯಾಲಯದ ಸೂಚನೆ ಇಲ್ಲದೆಯೇ ಯಾವುದೇ ವ್ಯಕ್ತಿಯ ಬಂಧನದ ಅವಧಿಯನ್ನು ವಿಸ್ತರಿಸುವುದು ಅಕ್ಷಮ್ಯ. ಇದು ಆತನ ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನವದೆಹಲಿ: ವಿಚಾರಣೆ ನಡೆಸದೆ ಅಥವಾ ನ್ಯಾಯಾಲಯದ ಸೂಚನೆ ಇಲ್ಲದೆಯೇ ಯಾವುದೇ ವ್ಯಕ್ತಿಯ ಬಂಧನದ ಅವಧಿಯನ್ನು ವಿಸ್ತರಿಸುವುದು ಅಕ್ಷಮ್ಯ. ಇದು ಆತನ ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ತನ್ನ ಅಭಿಪ್ರಾಯ ಆಲಿಸದೇ ಎರಡು ಬಾರಿ ಬಂಧನದ ಅವಧಿ ವಿಸ್ತರಿಸಿದ್ದ ಪೊಲೀಸ್ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಪ್ರಕಾಶ್ ಚಂದ್ರ ಯಾದವ್ ಅಲಿಯಾಸ್ ಮುಂಗೇರಿ ಯಾದವ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.
ಜಾರ್ಖಂಡ್‌ನ ಅಪರಾಧ ನಿಯಂತ್ರಣ ಕಾಯ್ದೆಯಡಿ 'ಸಮಾಜ ಘಾತುಕ ವ್ಯಕ್ತಿ' ಎಂಬ ಆರೋಪದ ಮೇಲೆ ಯಾದವ್ ಅವರನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು. ಹಾಗಾಗಿ, ಅವರು 'ಸುಪ್ರೀಂ'ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠವು, 'ಸಲಹಾ ಮಂಡಳಿ ಮುಂದೆ ಹಾಜರುಪಡಿಸದೆ ಯಾವುದೇ ವ್ಯಕ್ತಿಯ ಬಂಧನದ ಅವಧಿಯನ್ನು ವಿಸ್ತರಿಸುವಂತಿಲ್ಲ. ಜೊತೆಗೆ, ಮೂರು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿ ಇಡುವಂತಿಲ್ಲ. ಇದು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ರಚಿಸಿರುವ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಲಿದೆ' ಎಂದು ಹೇಳಿದೆ.
ಯಾದವ್ ಅವರ ಬಂಧನದ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಿರುವುದು ಅಕ್ರಮವಾದುದು. ಕೂಡಲೇ, ಸಾಹಿಬ್‌ಗಂಜ್ ಜಿಲ್ಲೆಯ ರಾಜ್‌ಮಹಲ್ ಜೈಲಿನಲ್ಲಿರುವ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿದೆ.
ಜಾರ್ಖಂಡ್‌ನಲ್ಲಿ 2002ರಿಂದ ಅನುಷ್ಠಾನಗೊಂಡಿರುವ ಈ ಕಾಯ್ದೆಯಡಿ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿದ ಶಂಕೆ ಮೇಲೆ ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರವು ಪೊಲೀಸರಿಗೆ ಇದೆ.