ಅಹಮದಾಬಾದ್: ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಸೇರಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೂವರು ಅಭ್ಯರ್ಥಿಗಳು ಗುಜರಾತ್‌ನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸೋಮವಾರ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ ಜೈಶಂಕರ್, ಕೇಸರಿದೇವಸಿಂಗ್ ಝಾಲಾ ಮತ್ತು ಬಾಬುಭಾಯ್ ದೇಸಾಯಿ ಅವರು 6 ವರ್ಷಗಳ ಅವಧಿಗೆ ಸಂಸತ್ತಿನ ಮೇಲ್ಮನೆಗೆ ಚುನಾಯಿತರಾದ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ.
2019 ರಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ರಾಜತಾಂತ್ರಿಕ ಅಧಿಕಾರಿ-ರಾಜಕಾರಣಿ ಎಸ್ ಜೈಶಂಕರ್ ಅವರು ಬಿಜೆಪಿ ಆಡಳಿತವಿರುವ ಗುಜರಾತ್ ನಿಂದ ರಾಜ್ಯಸಭೆಗೆ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.
ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರೀಟಾ ಮೆಹ್ತಾ ಅವರು ತಿಳಿಸಿದ್ದಾರೆ.
ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ 182 ಸದಸ್ಯ ಬಲದ ವಿಧಾನಸಭೆಯಲ್ಲಿ ಸಾಕಷ್ಟು ಶಾಸಕರನ್ನು ಹೊಂದಿಲ್ಲದ ಕಾರಣ ಪ್ರತಿಪಕ್ಷ ಕಾಂಗ್ರೆಸ್ ಗುಜರಾತ್‌ನಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಹೀಗಾಗಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.