ನವದೆಹಲಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ಭಾರತೀಯ ಅರಣ್ಯ ಸಮೀಕ್ಷೆ ಸಂಸ್ಥೆ, ಕೇಂದ್ರ ಮೃಗಾಲಯ ಪ್ರಾಧಿಕಾರ ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ದಳವನ್ನು ಏಕೀಕರಣ ಮಾಡುವ ಯೋಜನೆಯನ್ನು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಕೈಬಿಟ್ಟಿದೆ.

ಈ ನಾಲ್ಕು ಸಂಸ್ಥೆಗಳನ್ನು ಸಂಯೋಜಿಸಲು ಹಾಗೂ 19 ಕಡೆ ಸಮಗ್ರ ಪ್ರಾದೇಶಿಕ ಕಚೇರಿಗಳನ್ನು ಆರಂಭಿಸಲು 2020ರ ಆಗಸ್ಟ್‌ನಲ್ಲಿ ಸಚಿವಾಲಯವು ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕದ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. 'ಆಡಳಿತಾತ್ಮಕ ದೃಷ್ಟಿಯಿಂದ ನಾಲ್ಕು ಸಂಸ್ಥೆಗಳ ಏಕೀಕರಣ ಮಾಡಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ. ಆದರೆ, ಈ ನಾಲ್ಕು ಸಂಸ್ಥೆಗಳ ಉದ್ದೇಶವನ್ನೇ ಈ ಅಧಿಸೂಚನೆ ಬುಡಮೇಲು ಮಾಡಲಿದೆ. ಇದಕ್ಕೆ ಅವಕಾಶ ಕೊಡಬಾರದು' ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.
'19 ಸಮಗ್ರ ಪ್ರಾದೇಶಿಕ ಕಚೇರಿಗಳ ಆರಂಭದಿಂದ ಸ್ವಾಯತ್ತ ಸಂಸ್ಥೆಗಳ ಕಾರ್ಯವೈಖರಿಗೆ ಧಕ್ಕೆ ಆಗುವುದಿಲ್ಲ. ಸಮಗ್ರ ಹಣಕಾಸು ವಿಭಾಗದ ಒಪ್ಪಿಗೆ ಪಡೆದ ಬಳಿಕವೇ ಈ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಹುದ್ದೆಗಳನ್ನು ರಚನೆ ಮಾಡಿಲ್ಲ. ಸ್ವಾಯತ್ತ ಸಂಸ್ಥೆಗಳ ಮೇಲೆ ಹಿಡಿತ ಹೊಂದುವ ಉದ್ದೇಶ ಹೊಂದಿಲ್ಲ' ಎಂದು ಸಚಿವಾಲಯವು ಹೈಕೋರ್ಟ್‌ಗೆ ತಿಳಿಸಿತ್ತು. ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸಚಿವಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು. ಆದರೆ, ಈ ವರ್ಷದ ಜೂನ್ 26ರಂದು ಆದೇಶ ಹೊರಡಿಸಿರುವ ಸಚಿವಾಲಯವು, 'ನಾಲ್ಕು ಸಂಸ್ಥೆಗಳು ಈ ಹಿಂದಿನಂತೆಯೇ ಸ್ವಾಯತ್ತ ಸಂಸ್ಥೆಗಳಾಗಿ ಮುಂದುವರಿಯಲಿವೆ. ಏಕೀಕರಣ ಮಾಡುವುದಿಲ್ಲ' ಎಂದು ತಿಳಿಸಿದೆ.