ಗೇಮ್ಸ್ 24x7 ಮತ್ತು ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಷನ್ (ಕೆಎಸ್‌ಸಿಎಫ್) ಜಂಟಿಯಾಗಿ 'ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ: ಸಾಂದರ್ಭಿಕ ಡೇಟಾ ವಿಶ್ಲೇಷಣೆಯ ಒಳನೋಟಗಳು ಮತ್ತು ತಂತ್ರಜ್ಞಾನ ಚಾಲಿತ ಮಧ್ಯಸ್ಥಿಕೆ ತಂತ್ರಗಳ ಅಗತ್ಯತೆ' ಎಂಬ ಶೀರ್ಷಿಕೆ ಅಡಿ ನಡೆಸಿದ ಸಮಗ್ರ ಅಧ್ಯಯನದ ವರದಿಯು ಈ ಅಂಶಗಳನ್ನು ಬಹಿರಂಗಪಡಿಸಿದೆ.
ಈ ಅಧ್ಯಯನದ ವರದಿಯನ್ನು ಭಾನುವಾರ 'ವ್ಯಕ್ತಿಗಳ ಕಳ್ಳಸಾಗಣೆ ವಿರುದ್ಧದ ವಿಶ್ವ ದಿನ'ದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಈ ವರದಿಯು ದೇಶದಲ್ಲಿ ಮಕ್ಕಳ ಕಳ್ಳಸಾಗಣೆ ಬಿಕ್ಕಟ್ಟಿನ ಆತಂಕಕಾರಿ ಅಂಶಗಳ ಚಿತ್ರಣವನ್ನು ನೀಡಿದೆ.
ಮಕ್ಕಳ ಕಳ್ಳಸಾಗಣೆಯಲ್ಲಿ ಮುಂಚೂಣಿ ಜಿಲ್ಲೆಗಳಲ್ಲಿ ರಾಜಸ್ಥಾನದ ಜೈಪುರ ನಗರವು ಅಗ್ರಸ್ಥಾನದಲ್ಲಿದೆ. ಉಳಿದ ಸ್ಥಾನ ದೆಹಲಿಯದ್ದಾಗಿದೆ.
ಗೇಮ್ಸ್ 24x7ನ ಡೇಟಾ ವಿಜ್ಞಾನ ತಂಡ ಹಾಗೂ ಕೆಎಸ್‌ಸಿಎಫ್ ಜಂಟಿಯಾಗಿ 21 ರಾಜ್ಯಗಳ 262 ಜಿಲ್ಲೆಗಳಲ್ಲಿನ ಮಕ್ಕಳ ಕಳ್ಳ ಸಾಗಣೆ ಕುರಿತು ಸಮಗ್ರ ಮಾಹಿತಿಯಯನ್ನು ಕಲೆಹಾಕಿವೆ.
ಈ ಅವಧಿಯಲ್ಲಿ 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ 13,549 ಮಕ್ಕಳನ್ನು ರಕ್ಷಿಸಲಾಗಿದೆ. ಈ ರೀತಿ ರಕ್ಷಣೆ ಮಾಡಲಾದ ಮಕ್ಕಳಲ್ಲಿ ಶೇ 80ರಷ್ಟು ಮಕ್ಕಳು 13ರಿಂದ 18 ವರ್ಷ ವಯಸ್ಸಿನೊಳಗಿನವರು. ಶೇ 13ರಷ್ಟು ಮಕ್ಕಳು 9ರಿಂದ 12 ವರ್ಷ ವಯಸ್ಸಿನವರು. ಶೇ 2ರಷ್ಟು ಮಕ್ಕಳು 9 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ಎಂದೂ ಅಧ್ಯಯನವು ಹೇಳಿದೆ.
ಹೋಟೆಲ್, ಢಾಬಾಗಳಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಬಾಲಕಾರ್ಮಿಕರು ಅಂದರೆ ಶೇ 15.6,ಸಾರಿಗೆ ಕ್ಷೇತ್ರದಲ್ಲಿ ಶೇ 13ರಷ್ಟು ಹಾಗೂ ಗಾರ್ಮೆಂಟ್ಸ್‌ಗಳಲ್ಲಿ ಶೇ 11.18ರಷ್ಟು ಪ್ರಮಾಣದಲ್ಲಿ ಮಕ್ಕಳು ಕಾರ್ಮಿಕರಾಗಿದ್ದಾರೆ. ಅಷ್ಟೇ ಅಲ್ಲ, 5ರಿಂದ 8 ವರ್ಷ ವಯಸ್ಸಿನ ಮಕ್ಕಳನ್ನು ಕಾಸ್ಮೆಟಿಕ್ ಉದ್ಯಮದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎನ್ನುವ ಆತಂಕಕಾರಿ ಅಂಶವು ಅಧ್ಯಯನದ ವರದಿಯಲ್ಲಿದೆ.
ಕೋವಿಡ್‌ಪೂರ್ವ ಹಂತದಲ್ಲಿ (2016-2019) ವರದಿಯಾದ ಘಟನೆಗಳ ಸಂಖ್ಯೆ 267 ಆಗಿತ್ತು. ಆದರೆ ಕೋವಿಡ್ ನಂತರದ ಹಂತದಲ್ಲಿ (2021-2022) ಈ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದ್ದು 1,214 ತಲುಪಿದೆ. ಕರ್ನಾಟಕದಲ್ಲಿ ಕೋವಿಡ್‌ಗೂ ಮುನ್ನ 6 ಪ್ರಕರಣಗಳು ವರದಿಯಾಗುತ್ತಿದ್ದರೆ, ಕೋವಿಡ್ ಬಳಿಕ ಈ ಪ್ರಕರಣಗಳ ಸಂಖ್ಯೆ 110ಕ್ಕೆ ಏರಿದೆ ಎಂದೂ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.