ಕಠ್ಮಂಡು: 'ನೇಪಾಳದಲ್ಲಿ ನೆಲೆಸಿರುವ ಭಾರತ ಮೂಲದ ಉದ್ಯಮಿ ಸರ್ದಾರ್ ಪ್ರೀತಮ್ ಸಿಂಗ್ ಅವರು ನನ್ನನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಿದ್ದರು' ಎಂದು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಈಚೆಗೆ ನೀಡಿದ್ದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ವಿಪಕ್ಷಗಳು ಪ್ರಚಂಡ ಅವರ ರಾಜೀನಾಮೆಗೆ ಆಗ್ರಹಿಸಿವೆ.
ಸೋಮವಾರ ಆಯೋಜಿಸಿದ್ದ ಉದ್ಯಮಿ ಪ್ರೀತಮ್ ಸಿಂಗ್ ಅವರ ಕುರಿತ ಪುಸ್ತಕ 'ರೋಡ್ಸ್ ಟು ವ್ಯಾಲಿ: ದಿ ಲೆಗೆಸಿ ಆಫ್ ಸರ್ದಾರ್ ಪ್ರೀತಮ್ ಸಿಂಗ್ ಇನ್ ನೇಪಾಳ್' ಬಿಡುಗಡೆ ಸಮಾರಂಭದಲ್ಲಿ ಪ್ರಚಂಡ ಈ ಹೇಳಿಕೆ ನೀಡಿದ್ದರು.
'ನನ್ನನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಪ್ರೀತಮ್ ಅವರು ಅನೇಕ ಬಾರಿ ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದರು' ಎಂದು ಹೇಳಿದ್ದರು.
ಈ ಹೇಳಿಕೆ ಕಾರಣಕ್ಕಾಗಿ ಅಲ್ಲಿಯ ಪ್ರಮುಖ ವಿರೋಧ ಪಕ್ಷವಾದ ಸಿಪಿಎನ್- ಯುಎಂಲ್ ಸಂಸತ್ ಕಲಾಪಕ್ಕೆ ಬುಧವಾರ ಅಡ್ಡಿಪಡಿಸಿದೆ. ಪ್ರಚಂಡ ಅವರ ಹೇಳಿಕೆಯು ದೇಶದ ಸ್ವಾತಂತ್ರ್ಯ, ಘನತೆ, ಸಂವಿಧಾನ ಮತ್ತು ಸಂಸತ್ತಿಗೆ ಅಪಮಾನ ಮಾಡಿದಂತಿದೆ. ದೆಹಲಿಯಿಂದ ನೇಮಕವಾಗಿರುವ ಪ್ರಧಾನಿಯು ಈ ದೇಶಕ್ಕೆ ಅಗತ್ಯವಿಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
'ಪ್ರಚಂಡ ಅವರು ನೈತಿಕ ನೆಲೆಗಟ್ಟಿನಲ್ಲಿ ರಾಜೀನಾಮೆ ನೀಡಬೇಕು' ಎಂದು ಯುಎಂಎಲ್ ಆಗ್ರಹಿಸಿದೆ.
ಪ್ರಚಂಡ ಅವರ ಹೇಳಿಕೆಯನ್ನು ಆಡಳಿತಾರೂಢ ಮೈತ್ರಿಕೂಟದ ಸದಸ್ಯ ಪಕ್ಷಗಳೂ ವಿರೋಧಿಸಿವೆ. ಪ್ರಧಾನಿಯ ಹೇಳಿಕೆಯು ಟೀಕೆಗಳಿಗೆ ಅರ್ಹವಾಗಿದೆ. ಅವರ ಹೇಳಿಕೆ ಸರಿಯಿಲ್ಲ' ಎಂದು ನೇಪಾಳಿ ಕಾಂಗ್ರೆಸ್‌ನ ಬಿಶ್ವ ಪ್ರಕಾಶ್ ಶರ್ಮ ಹೇಳಿದ್ದಾರೆ.
ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಚಂಡ ಅವರು, 'ವಿವಾದ ಹುಟ್ಟು ಹಾಕುವ ಸಲುವಾಗಿಯೇ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದಿದ್ದಾರೆ.