ನವದೆಹಲಿ: ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಕರ್ನಾಟಕ ಸರ್ಕಾರದ 'ಅನ್ನ ಭಾಗ್ಯ ಯೋಜನೆ'ಗಾಗಿ ಅಕ್ಕಿ ಮಾರಾಟ ಮಾಡಲು ನಿರಾಕರಿಸಿದ ಬೆನ್ನಲ್ಲೇ ನಡೆಸಿರುವ ಇ-ಹರಾಜು ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಗಮವು ಒಟ್ಟು 3.86 ಲಕ್ಷ ಟನ್ ಅಕ್ಕಿ ಮಾರಾಟಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಿ ದರೂ ಬಿಡ್ಡಿಂಗ್ ಸ್ವೀಕರಿಸಿ ರುವುದು 170 ಟನ್ ಅಕ್ಕಿಗೆ ಮಾತ್ರ.
ಬಿಪಿಎಲ್ ಹಾಗೂ ಅಂತ್ಯೋದಯ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲು ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ಪೂರೈಕೆ ಮಾಡುವಂತೆ ಕರ್ನಾಟಕ ಸರ್ಕಾರವು ನಿಗಮಕ್ಕೆ ಮನವಿ ಮಾಡಿತ್ತು. ಆರಂಭದಲ್ಲಿ ಅಕ್ಕಿ ನೀಡಲು ಒಪ್ಪಿದ್ದ ನಿಗಮವು, ಬಳಿಕ ನಿರಾಕರಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಕ್ಕಿ ಒದಗಿಸುವಂತೆ ಮನವಿ ಮಾಡಿದ್ದರು. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪೀಯೂಷ್ ಗೋಯಲ್ ಅವರನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಎರಡು ಸಲ ಭೇಟಿ ಮಾಡಿ ಯೋಜನೆಗೆ ಸಹಕಾರ ನೀಡುವಂತೆ ಕೋರಿದ್ದರು. ರಾಜ್ಯದ ಒತ್ತಡಕ್ಕೆ ಉಭಯ ಸಚಿವರು ಮಣಿದಿರಲಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡುವಂತೆ ಸಲಹೆ ನೀಡಿ 'ಕೈ' ತೊಳೆದುಕೊಂಡಿದ್ದರು.