ಪೆರ್ಲ: ಕೇರಳ ರಾಜ್ಯ ಕುಟುಂಬಶ್ರೀಯ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ಅತ್ಯುತ್ತಮ ಕುಟುಂಬಶ್ರೀಯನ್ನು ಆಯ್ಕೆ ಮಾಡಿ ನೀಡಲಾಗುವ ಮಲೆಯಾಳ ಮನೋರಮ ರಜತಶ್ರೀ ಪುರಸ್ಕಾರಕ್ಕೆ ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ಆಯ್ಕೆಯಾಗಿದೆ. ಕಾಸರಗೋಡು ಜಿಲ್ಲೆಯ ತಾಲೂಕು ಮಟ್ಟದಲ್ಲಿ ನಡೆಸಿದ ಆಯ್ಕೆಯಲ್ಲಿ ಮಂಜೇಶ್ವರ ತಾಲೂಕಿನಿಂದ ಎಣ್ಮಕಜೆ ಸಿಡಿಎಸ್, ವೆಳ್ಳರಿಕುಂಡ್ ತಾಲೂಕಿನಿಂದ ಪನತ್ತಡಿ ಸಿಡಿಎಸ್, ಕಾಸರಗೋಡು ತಾಲೂಕಿನಿಂದ ಚೆಮ್ನಾಡ್ ಸಿಡಿಎಸ್, ಹೊಸದುರ್ಗ ತಾಲೂಕಿನಿಂದ ಅಜಾನೂರು ಸಿಡಿಎಸ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು 10 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ.
ಎಣ್ಮಕಜೆ ಗ್ರಾಮ ಪಂಚಾಯತಿನಾದ್ಯಂತ ಕುಟುಂಬಶ್ರೀ ಸಿಡಿಎಸ್ ವತಿಯಿಂದ ನಡೆಸಿದ ಹಲವು ಜನೋಪಯೋಗಿ ಯಶಸ್ವಿ ಯೋಜನೆಗಳನ್ನು ಪರಿಗಣಿಸಿ ಪುರಸ್ಕಾರ ಲಭಿಸಿರುವುದಾಗಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ತಿಳಿಸಿದ್ದು ಇದಕ್ಕಾಗಿ ಸರ್ವ ಸಹಕಾರ ನೀಡಿದ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಹಾಗೂ ಆಡಳಿತ ಸಮಿತಿ, ಪಂಚಾಯತಿ ಉದ್ಯೋಗಿಗಳನ್ನು ಸಿಡಿಎಸ್, ಕುಟುಂಬಶ್ರೀ ಸದಸ್ಯೆಯರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.