ಮಂಜೇಶ್ವರ: ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರು ಮಂಜೇಶ್ವರ ಪಂಚಾಯತಿ ವ್ಯಾಪ್ತಿಯ ಸಮಸ್ಯೆಗಳನ್ನು ನೋಡಿ ಆಲಿಸಿದರು. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಚಟುವಟಿಕೆಗಳ ಮೌಲ್ಯಮಾಪನಕ್ಕಾಗಿ ಜಿಲ್ಲಾಧಿಕಾರಿಗಳು ನಡೆಸಿದ ಪಂಚಾಯತಿ ಭೇಟಿಯ ಅಂಗವಾಗಿ ಅವರು ಮಂಜೇಶ್ವರ ಪಂಚಾಯತಿ ಕಚೇರಿ ಸಹಿತ ವಿವಿಧೆಡೆ ಭೇಟಿ ನೀಡಿದರು. ಪಂಚಾಯಿತಿಯ ಸಾಮಾನ್ಯ ಸಮಸ್ಯೆಗಳು ಮತ್ತು ಯೋಜನೆಗಳನ್ನು ಪಂಚಾಯಿತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ ಮತ್ತು ಕಾರ್ಯದರ್ಶಿಯವರು ಜಿಲ್ಲಾಧಿಕಾರಿಗೆ ಮಂಡಿಸಿದರು.
ಪಂಚಾಯಿತಿಯ ಎಲ್ಲ ವಾರ್ಡ್ ಸದಸ್ಯರು ತಮ್ಮ ಕ್ಷೇತ್ರದ ಅಗತ್ಯತೆ ಹಾಗೂ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಎದುರು ವಿವರಿಸಿದರು. ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನ ಹೊರತುಪಡಿಸಿ ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪಂಚಾಯಿತಿಯ ಸಭೆಯ ನಂತರ ಜಿಲ್ಲಾಧಿಕಾರಿ ಹಾಗೂ ತಂಡ ದುರ್ಗಮ ಕರಾವಳಿ ರಸ್ತೆಗೆ ಭೇಟಿ ನೀಡಿತು. ಕಣ್ವತೀರ್ಥ ಬೀಚ್ ಯೋಜನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಭಾರೀ ಮಳೆಯಿಂದ ಕಡಲ್ಕೊರೆತಕ್ಕೊಳಗಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು. ಮಂಜೇಶ್ವರ ಪಂಚಾಯಿತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ನಿರ್ಮಲೀಕರಣ ಯೋಜನಾ ಪ್ರದೇಶ ಹಾಗೂ ಮಂಜೇಶ್ವರ ನದಿಗೆ ಸೇರುವ ಹೊಳೆಗೆ ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶಕ್ಕೆ ಭೇಟಿ ನೀಡಿದರು. ನವೀಕರಣ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಪೊಸೋಟ್ ಅಂಗನವಾಡಿ ಇರುವ ಭಾಗ ಕುಸಿಯುವ ಸಂಭವವಿದ್ದು, ಕೂಡಲೇ ಯುಎಲ್ ಸಿಸಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.