ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂಸದಸ್ಯ ರಾಷ್ಟ್ರಗಳ ಪರಿಷ್ಕರಣೆಗೆ ಬ್ರಿಟನ್ ಪಟ್ಟು ಹಿಡಿದಿದ್ದು, ಭಾರತ, ಬ್ರೆಜಿಲ್, ಜರ್ಮನಿ ದೇಶಗಳಿಗೆ ಖಾಯಂ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದೆ.
ಭಾರತ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್ ಹಾಗೂ ಆಫ್ರಿಕಾ ದೇಶಗಳ ಪ್ರಾತಿನಿಧ್ಯಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ಸ್ಥಾನಗಳನ್ನು ಹೆಚ್ಚಿಸುವಂತೆ ಬ್ರಿಟನ್ ಕರೆ ನೀಡಿದ್ದು, ಭದ್ರತಾ ಮಂಡಳಿಯ ಸುಧಾರಣೆಗೆ ಇದು ಸಕಾಲವೆಂದು ಒತ್ತಿಹೇಳಿದೆ.
ವಿಶ್ವಸಂಸ್ಥೆಯಲ್ಲಿನ ಬ್ರಿಟನ್ ಕಾಯಂ ಪ್ರತಿನಿಧಿ ಮತ್ತು ಭದ್ರತಾ ಮಂಡಳಿಯ ಜುಲೈ ತಿಂಗಳ ಅಧ್ಯಕ್ಷತೆ ವಹಿಸಿರುವ ರಾಯಭಾರಿ ಬಾರ್ಬರಾ ವುಡ್‌ವರ್ಡ್ ಅವರು, ಭದ್ರತಾ ಮಂಡಳಿಯ ಜುಲೈ ತಿಂಗಳ ಕಾರ್ಯಕ್ರಮಗಳ ಕುರಿತು ವರದಿಗಾರರಿಗೆ ಮಾಹಿತಿ ನೀಡುವಾಗ ಈ ಹೇಳಿಕೆ ನೀಡಿದ್ದಾರೆ.
ಭಾರತ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್‌ಗೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಲು ಬ್ರಿಟನ್ ಬೆಂಬಲಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ವುಡ್‌ವರ್ಡ್ ಅವರು ‘ನಾಲ್ಕು ದೇಶಗಳನ್ನು ನಾವು ಬೆಂಬಲಿಸುತ್ತಿರುವುದರ ಹಿಂದಿನ ನಮ್ಮ ಚಿಂತನೆಯು ಭಾಗಶಃ ಭೌಗೋಳಿಕ ಸಮತೋಲನಕ್ಕೆ ಸಂಬಂಧಿಸಿದೆ. ಶಕ್ತಿಯುತ ವಿಶ್ವಸಂಸ್ಥೆ ಭದ್ರತಾ ಮಂಡಳಿಯು 2020 ರ ದಶಕವನ್ನು ಪ್ರವೇಶಿಸಲು ಇದು ಉತ್ತಮ ಸಮಯ ಎಂದು ಹೇಳಿದ್ದಾರೆ.