ನವದೆಹಲಿ: ಕೆನಡಾದ ಟೊರೆಂಟೊ ನಗರದಲ್ಲಿ ಜುಲೈ 8 ರಂದು ಖಾಲಿಸ್ತಾನಿ ಬೆಂಬಲಿಗರು ನಡೆಸಲು ಉದ್ದೇಶಿಸಿರುವ ರ‍್ಯಾಲಿ ಸಂಬಂಧ ಭಾರತ ಸರ್ಕಾರ ಕೆನಡಾದ ಹೈ ಕಮೀಷನರ್‌ಗೆ ಸಮನ್ಸ್ ಜಾರಿ ಮಾಡಿದೆ.
ಕೆನಡಾದಲ್ಲಿರುವ ಖಾಲಿಸ್ತಾನಿ ಪರ ಹೋರಾಟಗಾರರು ಜುಲೈ 8 ರಂದು ಟೊರಂಟೊ ನಗರದಲ್ಲಿ 'ಫ್ರೀಡಂ ರ‍್ಯಾಲಿ' ಆಯೋಜಿಸಿದ್ದಾರೆ.
ಈ ರ‍್ಯಾಲಿಯ ಪೋಸ್ಟರ್‌ನಲ್ಲಿ ಒಟ್ಟಾವದಲ್ಲಿರುವ ಭಾರತದ ರಾಯಭಾರ ಹಾಗೂ ಟೊರಂಟೊದಲ್ಲಿರುವ ರಾಜತಾಂತ್ರಿಕ ಅಧಿಕಾರಿ ವಿರುದ್ಧ ಬೆದರಿಕೆ ಹಾಕಲಾಗಿದೆ. ಹೀಗಾಗಿ ಭಾರತ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ಈ ಪೋಸ್ಟರ್‌ಗಳು ಕಾಣಿಸಿಕೊಂಡ ಬೆನ್ನಲ್ಲೇ ಭಾರತದ ರಾಯಭಾರ ಅಧಿಕಾರಿಗಳ ಸುರಕ್ಷತೆಯ ಬದ್ಧತೆ ತಮಗೆ ಇದೆ ಎಂದು ಹೇಳಿರುವ ಕೆನಡಾ ಸರ್ಕಾರ, ಇಂಥ ಪೋಸ್ಟರ್‌ಗಳನ್ನು ಸಹಿಸುವುದಿಲ್ಲ ಎಂದಿದೆ.
'ಭಾರತದ ರಾಯಭಾರ ಅಧಿಕಾರಿಗಳ ಸುರಕ್ಷತೆ ಬಗ್ಗೆ ವಿಯೆನ್ನಾ ಒಪ್ಪಂದದಂತೆ ಕೆನಡಾ ತನ್ನ ಜವಾಬ್ದಾರಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ' ಎಂದು ಕೆನಡಾದ ವಿದೇಶಾಂಗ ಸಚಿವ ಮೆಲಾನಿ ಜೋಲಿ ಹೇಳಿದ್ದಾರೆ.