ನವದೆಹಲಿ: 291 ಪ್ರಯಾಣಿಕರ ಸಾವಿಗೆ ಕಾರಣವಾದ ಒಡಿಶಾದ ಬಾಲೇಶ್ವರದಲ್ಲಿ ನಡೆದ ರೈಲು ದುರಂತಕ್ಕೆ ಮಾನವನಿಂದಾದ ಲೋಪವೇ ಕಾರಣ ಎಂದು ರೈಲ್ವೆ ಸುರಕ್ಷತಾ ಕಮಿಷನರ್ (ಸಿಆರ್‌ಎಸ್) ತನಿಖೆಯಲ್ಲಿ ಬಹಿರಂಗವಾಗಿದೆ. ಸಿಗ್ನಲ್, ಟೆಲಿಕಾಂ ಇಲಾಖೆ ಮತ್ತು ಸ್ಟೇಷನ್ ಕಾರ್ಯಾಚರಣೆ (ಟ್ರಾಫಿಕ್) ಇಲಾಖೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ತಪ್ಪಿನಿಂದಲೇ ದುರಂತ ಸಂಭವಿಸಿದೆ ವರದಿಯಲ್ಲಿ ಎಂದು ಬೊಟ್ಟು ಮಾಡಲಾಗಿದೆ.
ಆಗ್ನೇಯ ರೈಲ್ವೆ ಸಿಆರ್‌ಎಸ್ ಎ.ಕೆ.ಚೌಧರಿ ಅವರು ರೈಲ್ವೆ ಮಂಡಳಿಗೆ ಗುರುವಾರ ವರದಿ ಸಲ್ಲಿಸಿದ್ದಾರೆ. ಸಿಗ್ನಲ್ ವಿಭಾಗದ ಸಿಬ್ಬಂದಿ ದೋಷಯುಕ್ತ ಸಿಗ್ನಲ್ ವ್ಯವಸ್ಥೆಯನ್ನು ಸರಿಪಡಿಸಿದ್ದರು. ಆದರೆ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಅನುಸಾರ ಮಾರ್ಗಸೂಚಿ ಪಾಲನೆ ಮಾಡುವಲ್ಲಿ ವಿಫಲರಾಗಿದ್ದರು ಎಂದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಗ್ನಲ್ ವ್ಯವಸ್ಥೆ ಸರಿಪಡಿಸಲು ನಿರ್ವಾಹಕ 'ಸಂಪರ್ಕ ಕಡಿತ'ಕ್ಕೆ ಸ್ಟೇಷನ್ ಮಾಸ್ಟರ್‌ಗೆ ಮನವಿ ಸಲ್ಲಿಸಿದ್ದರು. ಕೆಲಸ ಪೂರ್ಣಗೊಂಡ ನಂತರ ಪುನಃ ಸಂಪರ್ಕ ಕಲ್ಪಿಸುವ ಸುತ್ತೋಲೆಯನ್ನೂ ಹೊರಡಿಸಲಾಗಿತ್ತು (ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಗ್ನಲ್ ವ್ಯವಸ್ಥೆ ಸಹಜವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರ್ಥ). ಆದರೆ ಈ ಮಾರ್ಗವಾಗಿ ರೈಲು ಹಾದು ಹೋಗುವ ಮೊದಲು ಸುರಕ್ಷತಾ ಕ್ರಮವಾಗಿ ಸಿಗ್ನಲ್ ವ್ಯವಸ್ಥೆ ಪರೀಕ್ಷಿಸಿರಲಿಲ್ಲ. ಹೀಗಾಗಿ ಭೀಕರ ದುರಂತಕ್ಕೆ ಸಿಗ್ನಲ್, ಟೆಲಿಕಾಂ ಇಲಾಖೆ ಮತ್ತು ಸ್ಟೇಷನ್ ಕಾರ್ಯಾಚರಣೆ ಸಿಬ್ಬಂದಿಯೇ ನೇರ ಹೊಣೆ ಎಂದು ವರದಿ ತಿಳಿಸಿದೆ.
ಹಾಗೆಯೇ ಸಿಬ್ಬಂದಿಗಳ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕವಾಗಿ ಅಪಘಾತ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದೂ ತಿಳಿಸಿದೆ.
ಆದರೆ, ಪ್ರಕರಣದ ಕುರಿತ ಸಿಬಿಐ ತನಿಖೆ ಮೇಲೆ ಯಾವುದೇ 'ಪ್ರಭಾವ ಅಥವಾ ಹಸ್ತಕ್ಷೇಪ' ಉಂಟಾಗದಿರಲಿ ಎಂಬ ಉದ್ದೇಶದಿಂದ ತ್ರಿವಳಿ ರೈಲು ದುರಂತ ಕುರಿತ ಸಿಆರ್‌ಎಸ್ ತನಿಖಾ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸದೇ ಇರಲು ರೈಲ್ವೆ ಇಲಾಖೆ ನಿರ್ಧರಿಸಿದೆ. ವರದಿ ಕುರಿತು ಪ್ರತಿಕ್ರಿಯೆ ನೀಡಲು ಮಂಡಳಿಯ ವಕ್ತಾರರು ನಿರಾಕರಿಸಿದ್ದಾರೆ.
ಕೋರೊಮಂಡಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲು ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ಜೂನ್ 2ರಂದು ಸಂಭವಿಸಿದ ಅಪಘಾತದಲ್ಲಿ 291 ಮಂದಿ ಮೃತಪಟ್ಟು, 1200ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ದುರಂತದ ನಂತರ ಆಗ್ನೇಯ ರೈಲ್ವೆ ಹಲವು ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.