ನವದೆಹಲಿ: 2004ರ ಹೊಸ ವರ್ಷದ ಮೊದಲ ದಿನ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ನಿವಾಸದಿಂದ ಅನತಿ ದೂರದಲ್ಲಿದ್ದ ಲೋಕ ಜನಶಕ್ತಿ ಪಾರ್ಟಿ ಅಧ್ಯಕ್ಷ ರಾಮವಿಲಾಸ್ ಪಾಸ್ವಾನ್ ಮನೆಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅಂದಿನ ಅವರ ಆ ಸಣ್ಣ ನಡಿಗೆ 'ಸಂಯುಕ್ತ ಪ್ರಗತಿಪರ ಮೈತ್ರಿಕೂಟ'(ಯುಪಿಎ) ರಚನೆಗೆ ಅಡಿಪಾಯ ಹಾಕಿತ್ತು.
ನಂತರ ಎರಡು ಅವಧಿಗೆ ಯುಪಿಎ ಕೇಂದ್ರದಲ್ಲಿ ಆಡಳಿತ ನಡೆಸಿದ್ದು ಇತಿಹಾಸ.
ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನಗಳಿಗೆ ಇನ್ಣೂ ಸ್ಪಷ್ಟರೂಪ ಬಂದಿಲ್ಲ. ಆದರೆ, ವಿಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ನಿವಾರಿಸಿ ಮೈತ್ರಿಕೂಟ ಸಾಧಿಸಲು 2004ರಲ್ಲಿ ಅನುಸರಿಸಿದ್ದ ತಂತ್ರಗಾರಿಕೆ ಪುನರಾವರ್ತನೆಯಾಗುವಂತೆ ಮಾಡಬೇಕು. ಸೋನಿಯಾ ಗಾಂಧಿ ಅವರ ಮೊರೆ ಹೋಗಿ, ವಿಪಕ್ಷ ಗಳನ್ನು ಒಟ್ಟುಗೂಡಿಸುವ ಜವಾಬ್ದಾರಿ ಅವರಿಗೇ ವಹಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕಳೆದ ಎರಡು ದಶಕಗಳಲ್ಲಿ ರಾಷ್ಟ್ರ ರಾಜಕಾರಣ ಎಂಬ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ತನ್ನ ಮಿತ್ರಪಕ್ಷಗಳ ಸಂಖ್ಯೆ ಹೆಚ್ಚಿಸಿ ಕೊಳ್ಳುವ ಉಮೇದು ಕಡಿಮೆಯಾಗಿಲ್ಲ. ತನ್ನ ರಾಜಕೀಯ ವಿರೋಧಿಗಳನ್ನು ಕಟ್ಟಿಹಾಕುವ ಶಕ್ತಿಯನ್ನು ವೃದ್ಧಿಸಿಕೊಂಡಿದೆ.
ಇಂಥ ಸಂದರ್ಭದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ನಂಬಲರ್ಹ ಹಾಗೂ ಬದ್ಧತೆ ಇರುವ ಪಕ್ಷ ಎಂಬುದನ್ನು ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿಕೊಡಲು ಸೋನಿಯಾ ಗಾಂಧಿ ಅವರು ಬೆಂಗಳೂರಿಗೆ ಪ್ರಯಾಣಿಸಬೇಕಿದೆ. ಬಿಜೆಪಿ ವಿರುದ್ಧ ವಿಪಕ್ಷಗಳ ಮಹಾಮೈತ್ರಿ ಬೆಸೆಯುವ ಜವಾಬ್ದಾರಿ ನಿಭಾಯಿಸಬೇಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
'ಸಾಕಷ್ಟು ಸಮಾಲೋಚನೆ ನಂತರವೇ, ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳುವುದು ಮುಖ್ಯ ಎಂಬ ನಿರ್ಣಯಕ್ಕೆ ಬರಲಾಗಿದೆ. ಕೊಡು-ಕೊಳ್ಳುವಿಕೆ ಆಧಾರದ ಮೇಲೆ ಪ್ರಾದೇಶಿಕ ಪಕ್ಷಗಳನ್ನು ಒಟ್ಟಿಗೆ ಒಯ್ಯುವುದಕ್ಕಾಗಿ ಕಾಂಗ್ರೆಸ್ ಪರವಾಗಿ ಬದ್ಧತೆ ಪ್ರಕಟಿಸುವ ರಾಜಕೀಯ ಪ್ರಭಾವವನ್ನು ಅವರು ಹೊಂದಿದ್ದಾರೆ' ಎಂದು ಬಿಹಾರದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷವೊಂದರ ನಾಯಕರೊಬ್ಬರು ಹೇಳುತ್ತಾರೆ.