ಬದಿಯಡ್ಕ: ಹಿಂದೂ ಧರ್ಮ ಭಾರತದಲ್ಲಿ ಆಳವಾಗಿ ಬೇರೂರಲು ಶ್ರೀ ಶಂಕರಚಾರ್ಯರ ಕೊಡುಗೆ ಅಪಾರವಾದುದು ಎಂಬುದಗಿ ಉದ್ಯಮಿ, ಸಾಮಾಜಿಕ-ಧಾರ್ಮಿಕ ಮುಖಂಡ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ತಿಳಿಸಿದ್ದಾರೆ. ಅವರು ಸೋಮವಾರ ಶ್ರೀ ಎಡನೀರುಮಠದ ಸಭಾಂಗಣದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಮೂರನೇ ವರ್ಷದ ಚಾತುರ್ಮಸ್ಯ ವ್ರತಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ರಂಗಕ್ಕೆ ನಿರಂತರ ಕೊಡುಗೆ, ಪ್ರೋತ್ಸಾಹ ನೀಡುತ್ತಾ ಬಂದಿರುವ ಶ್ರೀ ಎಡನೀರುಮಠದ ಹಿರಿಯ ಯತಿಗಳ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಮೂಲಕ ಶ್ರೀಮಠ ಮತ್ತಷ್ಟು ಅಭಿವೃದ್ಧಿಕಾಣಲಿ ಎಂದು ಹಾರೈಸಿದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಧರ್ಮ ಮತ್ತು ಸಂಸ್ಕøತಿ ಸಮಾಜದ ಎರಡು ಕಣ್ಣಿಗೆ ಸಮಾನ. ಕಲೆ ಮತ್ತು ಸಂಸ್ಕ್ರತಿಯ ಮಹಾನ್‍ಪೋಷಕರಾಗಿರುವ ಎಡನೀರು ಮಠ, ಧಾರ್ಮಿಕವಾಗಿಯೂ ಅಷ್ಟೇ ಪ್ರಬಲ ಕೇಂದ್ರವಗಿದೆ. ಶ್ರೀ ಎಡನೀರು ಮಠ ಕೇರಳ ಮತ್ತು ಕರ್ನಾಟಕವನ್ನು ಪರಸ್ಪರ ಬೆಸೆಯುವ ಕೊಂಡಿಯಾಗಿದೆ. ಮೂರು ತಿಂಗಳ ಕಾಲ ನಡೆಯಲಿರುವ ಚಾತುರ್ಮಾಸ್ಯ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಲಾತಂಡದ ಕಾರ್ಯಕ್ರಮ ಪ್ರಸ್ತುತಪಡಿಸಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.
ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಕೃಷ್ನೈಕ್ಯ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಸಾಮಾಜಿಕ ಕಳಕಳಿ, ಕಲಾ ಪೋಷಣೆ ಹಗೂ ಅವರ ಕಾನೂನು ಹೋರಾಟ ಶ್ರೀಮಠದ ಖ್ಯಾತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುವಂತೆ ಮಾಡಿದೆ. ಮೂರನೇ ವರ್ಷದ ಚಾತುರ್ಮಾಸ್ಯ ಕೈಗೊಳ್ಳುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದೂರದರ್ಶಿತ್ವ ಹಾಗೂ ಕಲೆಯ ಮೇಲಿನ ಪ್ರೀತಿ, ಮಠ ಹಾಗೂ ಸಮಾಜಕ್ಕೆ ಕಳಶಪ್ರಾಯವಾಗಿರುವುದಾಗಿ ತಿಳಿಸಿದರು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಚಾತುರ್ಮಾಸ್ಯ ಕಾರ್ಯಕ್ರಮವನ್ನು ಸಮಾಜದ ಜನರನ್ನು ಒಟ್ಟುಸೇರಿಸಿ ನಡೆಸಲು ತೀರ್ಮಾನಿಸಲಾಗಿದೆ. ಸುಮಾರು ಮೂರು ತಿಂಗಳ ಕಾಲ ನಡೆಯಲಿರುವ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಜನತೆಯ ಸಹಕಾರ ಅಗತ್ಯ ಎಂದು ತಿಳಿಸಿದರು.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಉಪಸ್ಥಿತರಿದ್ದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಟಿ. ಶ್ಯಾಮ ಭಟ್ ಐಎಎಸ್ ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಯ ವಂದಿಸಿದರು.
ಚಾತುರ್ಮಾಸ್ಯಕ್ಕೆ ಚಾಲನೆ:
ಚಾತುರ್ಮಾಸ್ಯ ಕಾರ್ಯಕ್ರಮದ ಅಂಗವಾಗಿ ಶ್ರೀ ಮಠದಲ್ಲಿ 108ಕಾಯಿ ಗಣಹೋಮ, ವ್ಯಾಸಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ವ್ಯಾಸ ಪೂಜೆ ನೆರವೆರಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ ದಾಸ ವಾಣಿ ಕಾರ್ಯಕ್ರಮ, ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ 'ಅಕ್ಷಯಾಂಬರ'ಯಕ್ಷಗಾನ ಬಯಲಾಟ ಜರುಗಿತು.