ಕಾಸರಗೋಡು: ಕಾಸರಗೋಡಿನ ಕನ್ನಡಿಗರು ಆಲಸಿ ಮನೋಭಾವ ಹೊಂದಿದರೆ,ಇಂದಲ್ಲ,ನಾಳೆ ನಾವು ಅನ್ಯ ಭಾಷಿಕರ ಗುಲಾಮರಾಗಿ ಬಾಳಬೇಕಾದೀತು. ನಾವು ಕನ್ನಡಿಗರು ಎಂಬ ಸ್ವಾಭಿಮಾನವನ್ನು ಇಟ್ಟುಕೊಳ್ಳದೇ ಹೋದರೆ ಮುಂದಿನ ತಲೆಮಾರಿಗೆ ಕಷ್ಟ ಕಟ್ಟಿಟ್ಟ ಬುತ್ತಿ. ನಮ್ಮ ಹಕ್ಕನ್ನು ನಾವು ಕೇಳದೇ ಹೋದರೆ ಹೇಗೆ? ಕನ್ನಡ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳಿಸಿದರೆ ಮಾತ್ರ ಕನ್ನಡ ಭಾಷೆ ಉಳಿದೀತು.ಎಂದು ರಂಗ ನಿರ್ದೇಶಕ,ನಟ ಕಾಸರಗೋಡು ಚಿನ್ನಾ ಹೇಳಿದರು. ನಮ್ಮ 'ಸಂಸ್ಕೃತಿ' ಪರಂಪರೆಯನ್ನು ನಮ್ಮ ಮಕ್ಕಳಿಗೆ ಹೇಳಿ ಕೊಡುವ ಕೆಲಸ ಪ್ರಾಮಾಣಿಕವಾಗಿ ಹಿರಿಯರು ಮಾಡಬೇಕಾಗಿರೋದು ನಮ್ಮ ಕರ್ತವ್ಯವಾಗಬೇಕೆಂದರು.
ಅವರು ಮೇಘ ರಂಜನಾ(ರಿ) ಚಂದ್ರಗಿರಿ ಸಾಹಿತ್ಯಕ- ಸಾಂಸ್ಕೃತಿಕ ಸಂಸ್ಥೆ ತಂಡದ ಐದನೇ ವರ್ಷದ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ, ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾ ಭವನದಲ್ಲಿ ಏರ್ಪಡಿಸಿದ 'ಭಜಿಸು ಕನ್ನಡ' ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೀರ್ತನೆಕಾರರಾದ ಶ್ರೀ ನರಸಿಂಹ ಹೊಸಮನೆ,ರಂಗನಟ,ನಿರ್ದೇಶಕ ಉದಯಕುಮಾರ್ ಮನ್ನಿಪ್ಪಾಡಿ ಇವರನ್ನು ಸಂಸ್ಥೆಯ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು
. ಸನ್ಮಾನಿತರ ಪರವಾಗಿ ಉದಯಕುಮಾರ್ ಮಾತನಾಡಿದರು.
ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರರೂ, ಗಾಯಕರು,ಕ್ರೀಡಾಪಟು ಆಗಿರುವ ಕೆ.ಜಿ ಶಾನುಭೋಗ್ ಅವರು ಅಧ್ಯಕ್ಷತೆ ವಹಿಸಿ ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆ ಜೀವಂತವಿದ್ದು, ಅದನ್ನು ಉಳಿಸಬೇಕಲ್ಲದೆ, ಕನ್ನಡ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮನವಿ ಮಾಡಿದರು.
ಮೇಘರಂಜನಾ ಸಂಸ್ಥೆ ಯ ನಿರ್ದೇಶಕಿ ಮೇಘನ ಪ್ರಾರ್ಥನೆ ಹಾಡಿ, ಆಡಳಿತ ನಿರ್ದೇಶಕರಾದ ಶ್ರೀ ಪುರುಷೋತ್ತಮ ಕೊಪ್ಪಲ್ ಸ್ವಾಗತಿಸಿದರು.ಸಂಘಟಕ, ಅಧ್ಯಾಪಕ ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು.
ಅಂತರರಾಷ್ಟ್ರೀಯ ಗಾಯಕ ಶ್ರೀ ರವೀಂದ್ರ ಪ್ರಭು,ಕಿಶೋರ್ ಪೆರ್ಲ ಬಳಗದವರಿಂದ *ಮೇಘ ಮಲಾರ್* ಸಂಗೀತ ಕಾರ್ಯಕ್ರಮ ಸೇರಿದ ಜನಸ್ತೋಮವನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆಲ್ಲ ಮೇಘ ರಂಜನಾ ತಂಡದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕು.ಮೇಘನ ವಂದಿಸಿದರು.ಮೇಘರಂಜನಾ ನಿರ್ದೇಶಕಿ ಶ್ರೀಮತಿ ರೂಪಕಲಾ.ಕೆ , ನಿರ್ದೇಶಕರಾದ ರಂಜನ್ ಕೆ, ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಶ್ರೀ ಸದಾಶಿವ ಅವರು ಉಪಸ್ಥಿತರಿದ್ದರು.