ಕೊಚ್ಚಿ: ಮಗುವಿಗೆ ಜನ್ಮ ನೀಡುವ ಮೂಲಕ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಕೇರಳ ತೃತೀಯಲಿಂಗಿ ದಂಪತಿ ಇದೀಗ ಕೋರ್ಟ್ ಮೆಟ್ಟಿಲೇರುವುದರೊಂದಿಗೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಪಾಲಕರ ಹೆಸರಿನ ವಿಚಾರವಾಗಿ ದಂಪತಿ ನ್ಯಾಯಾಲಯದ ಕದ ತಟ್ಟಿದ್ದಾರೆ.
ಕೊಚ್ಚಿ: ಮಗುವಿಗೆ ಜನ್ಮ ನೀಡುವ ಮೂಲಕ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಕೇರಳ ತೃತೀಯಲಿಂಗಿ ದಂಪತಿ ಇದೀಗ ಕೋರ್ಟ್ ಮೆಟ್ಟಿಲೇರುವುದರೊಂದಿಗೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಪಾಲಕರ ಹೆಸರಿನ ವಿಚಾರವಾಗಿ ದಂಪತಿ ನ್ಯಾಯಾಲಯದ ಕದ ತಟ್ಟಿದ್ದಾರೆ.
ಜನನ ಪ್ರಮಾಣ ಪತ್ರದಲ್ಲಿ ತಂದೆ ಮತ್ತು ತಾಯಿ ಅಂತ ಉಲ್ಲೇಖಿಸದೇ ಕೇವಲ ಪಾಲಕರು ಎಂದು ನಮೂದಿಸಲು ಕೋಯಿಕ್ಕೋಡ್ ಪಾಲಿಕಗೆ ನಿರ್ದೇಶನ ನೀಡುವಂತೆ ತೃತೀಯಲಿಂಗಿ ದಂಪತಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರ್ಜಿಯನ್ನು ಹೆಣ್ಣಾಗಿ ಹುಟ್ಟಿ ಪುರುಷನಾಗಿ ಬದಲಾಗಿರುವ ಜಹಾದ್ ಮತ್ತು ಪುರುಷನಾಗಿ ಹುಟ್ಟಿ ಹೆಣ್ಣಾಗಿ ಬದುಕು ನಡೆಸುತ್ತಿರುವ ಜಿಯಾ ಪೊವೆಲ್ ಸಲ್ಲಿಸಿದ್ದಾರೆ. ಇವರು ಭಾರತದ ಮೊದಲ ತೃತೀಯಲಿಂಗಿ ಪಾಲಕರಾಗಿದ್ದಾರೆ. ಫೆ. 8ರಂದು ಜಹಾದ್ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು.
ಪಾಲಕರೆಂದು ನಮೂದಿಸಿ
ಇದೀಗ ಕೋಯಿಕ್ಕೊಡ್ ಪಾಲಿಕೆ, ಮಗುವಿನ ಜನನ ಪ್ರಮಾಣಪತ್ರದಲ್ಲಿ ಜಿಯಾ ಪೊವೆಲ್ರನ್ನು ತಂದೆ ಮತ್ತು ಜಹಾದ್ರನ್ನು ತಾಯಿ ಎಂದು ಹೆಸರಿಸಿದೆ. ಇದನ್ನು ವಿರೋಧಿಸಿರುವ ದಂಪತಿ ತಂದೆ-ತಾಯಿ ಎಂದು ಉಲ್ಲೇಖಿಸಿದೇ ಕೇವಲ ಪಾಲಕರು ಎಂಬುದನ್ನು ಮಾತ್ರ ಉಲ್ಲೇಖಿಸುವಂತೆ ನ್ಯಾಯಾಲಯದಲ್ಲಿ ಕೋರಿದ್ದಾರೆ.
ಪಾಲಿಕೆ ನಿರಾಕರಣೆ
ಮಗುವಿನ ಜೈವಿಕ ತಾಯಿಯಾಗಿರುವ ಜಹಾದ್, ವರ್ಷಗಳ ಹಿಂದೆಯೇ ತನ್ನನ್ನು ಪುರುಷ ಎಂದು ಗುರುತಿಸಿಕೊಂಡಿದ್ದು, ಪ್ರಸ್ತುತ ಸಮಾಜದಲ್ಲಿ ಪುರುಷ ಸದಸ್ಯನಾಗಿಯೇ ಜೀವಿಸುತ್ತಿರುವುದರಿಂದ ಜನನ ಪ್ರಮಾಣಪತ್ರದಲ್ಲಿ ತಂದೆ ಮತ್ತು ತಾಯಿಯ ಹೆಸರನ್ನು ತಪ್ಪಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದರು. ಆದರೆ, ಪಾಲಿಕೆ ಅವರನ್ನು ಪಾಲಕರು ಎಂದು ಉಲ್ಲೇಖಿಸಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಂದಿನ ವಾರ ವಿಚಾರಣೆ
ನ್ಯಾಯಮೂರ್ತಿ ಎನ್. ನಗರೇಶ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರ ಕುಂದುಕೊರತೆಯನ್ನು ಪರಿಹರಿಸುವಂತೆ ರಾಜ್ಯ ಸರ್ಕಾರದ ವಕೀಲರಿಗೆ ಸೂಚನೆ ನೀಡಿದ್ದಾರೆ. ಅರ್ಜಿಯಲ್ಲಿನ ಕೆಲವು ತಾಂತ್ರಿಕ ದೋಷಗಳನ್ನು ರಾಜ್ಯದ ವಕೀಲರು ಗುರುತಿಸಿದ ಬಳಿಕ ನ್ಯಾಯಾಲಯವು ಮುಂದಿನ ಗುರುವಾರಕ್ಕೆ ಪ್ರಕರಣವನ್ನು ಮುಂದೂಡಿದೆ.