ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕೆಂಬ ಬಿಗಿ ನಿಲುವಿಗೆ ಪ್ರತಿಪಕ್ಷಗಳ ಮೈತ್ರಿಕೂಟವಾದ 'ಇಂಡಿಯಾ' ಪಟ್ಟುಹಿಡಿದಿದ್ದರಿಂದ ಸೋಮವಾರವೂ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯಾಯಿತು.
ಮುಂಗಾರು ಅಧಿವೇಶನದ ಮೂರನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 'ಇಂಡಿಯಾ' ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಮಣಿಪುರ ಸಂಘರ್ಷವು ವಾಗ್ವಾದಕ್ಕೆ ಕಾರಣವಾಯಿತು.
ಕಲಾಪ ಮುಂದೂಡಿಕೆವರೆಗೂ ಸಂಸತ್‌ನ ಒಳಗೆ ನಡೆದ ಹೋರಾಟವು ಬಳಿಕ ಹೊರಗೆ ಪ್ರತಿಧ್ವನಿಸಿತು. ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ಗಾಂಧೀಜಿ ಪ್ರತಿಮೆ ಮುಂಭಾಗ 'ಇಂಡಿಯಾ' ಪ್ರತಿಭಟನೆ ನಡೆಸಿತು. ಇದಕ್ಕೆ ಪ್ರತಿಯಾಗಿ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ನಡೆದಿರುವ ಮಹಿಳಾ ದೌರ್ಜನ್ಯ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯೂ ಪ್ರತಿಭಟನೆ ನಡೆಸಿತು.
ಅಮಿತ್ ಶಾ ಮನವಿ: ಗೃಹ ಸಚಿವ ಅಮಿತ್ ಶಾ ಅವರು, 'ಸಂಸತ್‌ನಲ್ಲಿ ಕಣಿವೆ ರಾಜ್ಯದ ಸಂಘರ್ಷ ಕುರಿತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಹಾಗಾಗಿ, ಅನಗತ್ಯ ಗದ್ದಲ ಸೃಷ್ಟಿಸುವುದು ಸರಿಯಲ್ಲ' ಎಂದು ಲೋಕಸಭೆಯಲ್ಲಿ ಪ್ರಕಟಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷಗಳ ನಾಯಕರು, 'ಚರ್ಚೆಗೂ ಮೊದಲು ಮೋದಿ ಅವರು ಹೇಳಿಕೆ ನೀಡಬೇಕು' ಎಂದು ಬೇಡಿಕೆ ಮುಂದಿಟ್ಟರು.
'ಸರ್ಕಾರ ಚರ್ಚೆಗೆ ಬದ್ಧವಿದ್ದರೂ ವಿರೋಧ ಪಕ್ಷಗಳು ಸಿದ್ಧವಿಲ್ಲದಿರುವುದು ನನಗೆ ಅಚ್ಚರಿ ಮೂಡಿಸಿದೆ' ಎಂದ ಶಾ ಅವರು, 'ಮಣಿಪುರಕ್ಕೆ ಸಂಬಂಧಿಸಿದಂತೆ ದೇಶದ ಜನರಿಗೆ ಸತ್ಯ ತಿಳಿಯಬೇಕಿದೆ. ಇದಕ್ಕೆ ಅವಕಾಶ ನೀಡಬೇಕು' ಎಂದು ಕೋರಿದರು.
ಫಲಪ್ರದವಾಗದ ಮಾತುಕತೆ: ಎರಡು ದಿನಗಳ ಕಾಲ ಕಲಾಪವು ಗದ್ದಲ, ಕೋಲಾಹಲದಲ್ಲಿ ಕೊಚ್ಚಿ ಹೋಗಿದ್ದರಿಂದ ಪ್ರತಿಪಕ್ಷಗಳ ನಾಯಕರ ಜೊತೆಗೆ ಮಾತುಕತೆ ನಡೆಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಸರ್ಕಾರ ಜವಾಬ್ದಾರಿ ನೀಡಿತ್ತು. ಆದರೆ, ಈ ಮಾತುಕತೆಯೂ ಫಲಪ್ರದವಾಗಿಲ್ಲ.
'ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ರಾಜನಾಥ ಸಿಂಗ್ ಅವರು ಚರ್ಚಿಸಿದ್ದರು. ಮೋದಿ ಹೇಳಿಕೆ ನೀಡದ ಹೊರತು ನಾವು ಚರ್ಚೆಗೆ ಸಿದ್ಧವಿಲ್ಲವೆಂದು ಖರ್ಗೆ ಬಿಗಿಪಟ್ಟು ಹಿಡಿದಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ನಾಯಕರು ಇದೇ ಉತ್ತರ ನೀಡಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ಸಂವೇದನೆ ಇಲ್ಲ: ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಕೇಂದ್ರ ಸರ್ಕಾರವು ಸಂವೇದನಾ ರಹಿತವಾಗಿ ವರ್ತಿಸುತ್ತಿದೆ' ಎಂದು ಆಪಾದಿಸಿದರು.
'ಸದನದಲ್ಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ, ಇದಕ್ಕೂ ಮೊದಲು ಪ್ರಧಾನಿ ಅವರ ಹೇಳಿಕೆ ಬಯಸಿದ್ದೇವೆ. ಮೋದಿ ಅವರು ಹೊರಗಡೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಸದನದಲ್ಲಿ ಮಾತನಾಡಲು ಹಿಂಜರಿಕೆ ತೋರುತ್ತಿದ್ದಾರೆ. ಇದು ಸಂಸದೀಯ ವ್ಯವಸ್ಥೆಗೆ ಮಾಡುವ ಅಪಮಾನವಾಗಿದೆ' ಎಂದು ಟೀಕಿಸಿದರು.
ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್, 'ಸಂಸತ್‌ನಲ್ಲಿ ಹೇಳಿಕೆ ನೀಡಲು ಮೋದಿ ಅವರಿಗೆ ಹಿಂಜರಿಕೆ ಏಕೆ' ಎಂದು ಪ್ರಶ್ನಿಸಿದ್ದಾರೆ.
ಪ್ರಲ್ಹಾದ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಈಗಾಗಲೇ ಮಣಿಪುರ ವಿಷಯದ ಬಗ್ಗೆ ಮೋದಿ ಮಾತನಾಡಿದ್ದಾರೆ. ಹಾಗಾಗಿ ಉಭಯ ಸದನಗಳಲ್ಲಿ ಈ ಬಗ್ಗೆ ಚರ್ಚೆ ನಡೆಸದಿದ್ದರೆ ತಪ್ಪಾಗಲಿದೆಪ್ರಿಯಾಂಕಾ ಚತುರ್ವೇದಿ ಸಂಸದೆ ಶಿವಸೇನಾಸಂಸತ್ ಮೂಲಕ ದೇಶದ ಜನರಿಗೆ ಉತ್ತರ ನೀಡಲು ಮೋದಿ ಸಿದ್ಧರಿಲ್ಲ. ಹಿಂಸಾಚಾರ ನಿಯಂತ್ರಿಸಲು ಗೃಹ ಸಚಿವರಿಗೂ ಸಾಧ್ಯವಾಗಿಲ್ಲಲಲನ್ ಸಿಂಗ್ ಜೆಡಿಯು ನಾಯಕ ಮಣಿಪುರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲಸರ್ವಪಕ್ಷಗಳ ಸಹಕಾರ ಕೋರಿದ ಧನಕರ್
ಸುಗಮ ಕಲಾಪ ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನಕರ್ ಅವರು ಸರ್ವಪಕ್ಷಗಳ ಬೆಂಬಲ ಕೋರಿದ್ದಾರೆ. ಕಲಾಪ ಮುಂದೂಡಿದ ಬಳಿಕ ಈ ಸಂಬಂಧ ಅವರು ಸಭೆ ನಡೆಸಿದರು. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬಿಆರ್‌ಎಸ್‌ನ ಕೆ. ಕೇಶವರಾವ್ ಬಿಜೆಡಿಯ ಸಸ್ಮಿತ್ ಪಾತ್ರ ಎಎಪಿಯ ರಾಘವ ಚಂದ್ರ ರಾಜ್ಯಸಭೆ ನಾಯಕ ಪೀಯೂಷ್ ಗೋಯಲ್ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಂಡಿದ್ದರು. 'ಕಲಾಪಕ್ಕೆ ಅಡ್ಡಿಪಡಿಸದಂತೆ ಎಲ್ಲರೂ ಸಹಕಾರ ಕೋರಿದ್ದೇನೆ' ಎಂದು ಧನಕರ್ ಟ್ವೀಟ್ ಮಾಡಿದ್ದಾರೆ.
ಕಲಾಪದಿಂದ ಎಎಪಿ ಸಂಸದ ಸಂಜಯ್ ಸಿಂಗ್ ಅಮಾನತು
: ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಮುಂಗಾರು ಅಧಿವೇಶನ ಮುಗಿಯುವವರೆಗೂ ರಾಜ್ಯಸಭೆಯ ಕಲಾಪದಿಂದ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ.
ಮಧ್ಯಾಹ್ನ 12 ಗಂಟೆಗೆ ಮೇಲ್ಮನೆಯ ಕಲಾಪ ಆರಂಭಗೊಂಡಿತು. ಮಣಿಪುರ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರು ಧರಣಿ ನಡೆಸಿದರು. ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಧನಕರ್ ಪ್ರಕಟಿಸಿದರು. ಆದರೆ ಮೋದಿ ಅವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.
ಕೆಲವು ನಿಮಿಷಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಿತು. ಈ ವೇಳೆ ಸಭಾಪತಿ ಪೀಠದತ್ತ ಧಾವಿಸಿದ ಸಂಜಯ್ ಸಿಂಗ್ ಅವರು ಧನಕರ್ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಧರಣಿಗೆ ಮುಂದಾದರು. ತಮ್ಮ ಆಸನಕ್ಕೆ ತೆರಳುವಂತೆ ಧನಕರ್ ಸೂಚಿಸಿದರು. ಆದರೆ ಇದಕ್ಕೆ ಅವರು ಒಪ್ಪಿಗೆ ಸೂಚಿಸಲಿಲ್ಲ. ಬಳಿಕ ಸಭಾ ನಾಯಕ ಪೀಯೂಷ್ ಗೋಯಲ್ ಸಿಂಗ್ ಅವರನ್ನು ಅಮಾನತುಗೊಳಿಸುವಂತೆ ನಿರ್ಣಯ ಮಂಡಿಸಿದರು.
ಇದಕ್ಕೆ ಧ್ವನಿ ಮತದ ಮೂಲಕ ಸದನವೂ ಒಪ್ಪಿಗೆ ಸೂಚಿಸಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ 'ಇಂಡಿಯಾ' ಪ್ರತಿಭಟನೆಗೆ ಮುಂದಾಯಿತು. ಅಮಾನತು ಆದೇಶ ಪ್ರಕಟಿಸಿದ ಅಧ್ಯಕ್ಷರು ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗ ಸಂಜಯ್ ಸಿಂಗ್ ಕಲಾಪದಿಂದ ಹೊರಹೋಗಲು ನಿರಾಕರಿಸಿದರು. ಬಳಿಕ 3ಕ್ಕೆ ಮುಂದೂಡಲಾಯಿತು. ಮತ್ತೆ ಆರಂಭಗೊಂಡಾಗ ಗದ್ದಲ ಮುಂದುವರಿದಿದ್ದರಿಂದ ಮುಂದೂಡಲಾಯಿತು.