ಬ್ಯಾಂಕಾಕ್: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ನೇಪಾಳ ಮತ್ತು ಬಾಂಗ್ಲಾದೇಶದ ವಿದೇಶಾಂಗ ಸಚಿವರನ್ನು ಬ್ಯಾಂಕಾಕ್‌ನಲ್ಲಿ ಭೇಟಿಯಾಗಿದ್ದು, ಸಹಕಾರ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಚರ್ಚಿಸಿದರು. ಜತೆಗೆ ಪ್ರದೇಶಿಕ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ 'ಮೆಕಾಂಗ್ ಗಂಗಾ ಸಹಕಾರ ಕಾರ್ಯವಿಧಾನ'ದ ವಿದೇಶಾಂಗ ಸಚಿವರ 12ನೇ ಸಭೆಯಲ್ಲಿ ಜೈಶಂಕರ್ ಭಾಗವಹಿಸಿದ್ದರು. ನಂತರ 'ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ (ಬಿಐಎಂಎಸ್‌ಟಿಇಸಿ)'ದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲೂ ಪಾಲ್ಗೊಂಡರು.
ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ನೇಪಾಳ ಮತ್ತು ಭೂತಾನ್ ಅನ್ನು ಬಿಐಎಂಎಸ್‌ಟಿಇಸಿ ಒಳಗೊಂಡಿದೆ. ಏಳು ದೇಶಗಳು 1.73 ಶತಕೋಟಿ ಜನರಿಗೆ ನೆಲೆಯಾಗಿದ್ದು, 4 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಒಟ್ಟು ಆಂತರಿಕ ಉತ್ಪನ್ನವನ್ನು ಹೊಂದಿವೆ.
ಸಭೆಯ ನಂತರ ಟ್ವೀಟ್ ಮಾಡಿದ ಜೈಶಂಕರ್, 'ನೇಪಾಳ ವಿದೇಶಾಂಗ ಸಚಿವ ನಾರಾಯಣ್ ಪ್ರಕಾಶ್ ಸೌದ್ ಅವರೊಂದಿಗೆ ಒಂದೊಳ್ಳೆ ಭೇಟಿಯಾಗಿದೆ. ನಮ್ಮ ಸರ್ಕಾರಗಳು ನಿಗದಿಪಡಿಸುವ ಸಹಕಾರದ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಒಟ್ಟಿಗೆ ಕೆಲಸ ಮಾಡಲು ನಾವು ಒಪ್ಪಿಕೊಂಡಿದ್ದೇವೆ' ಎಂದು ಹೇಳಿದರು.
'ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಉಭಯ ರಾಷ್ಟ್ರಗಳ ಮಂತ್ರಿಗಳು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ' ಎಂದು ನೇಪಾಳ ವಿದೇಶಾಂಗ ವ್ಯವಹಾರಗಳ ಇಲಾಖೆ ಟ್ವೀಟ್ ಮಾಡಿ ತಿಳಿಸಿದೆ.
'ಪರಸ್ಪರ ಹಿತಾಸಕ್ತಿಗಾಗಿ ನೇಪಾಳದೊಂದಿಗೆ ನಿರಂತರವಾಗಿ ಕೆಲಸ ಮಾಡಲು ಸಿದ್ಧ ಎಂದು ಜೈಶಂಕರ್ ಹೇಳಿದ್ದಾರೆ' ಎಂದು ವಿದೇಶಾಂಗ ಸಚಿವ ಸೌದ್ ಅವರ ಕಚೇರಿ ತಿಳಿಸಿದೆ.
ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬ್ದುಲ್ ಮೊಮೆನ್ ಅವರನ್ನೂ ಜೈಶಂಕರ್ ಇದೇ ವೇಳೆ ಭೇಟಿಯಾದರು.
'ಮೊಮೆನ್ ಅವರೊಂದಿಗಿನ ಭೇಟಿಯ ವೇಳೆ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರದ ಕುರಿತು ಚರ್ಚಿಸಲಾಯಿತು. ಪ್ರಾದೇಶಿಕ ವಿಚಾರಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ' ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಅಭಿವೃದ್ಧಿಯ ದೃಷ್ಟಿಯಿಂದ ಬಿಐಎಂಎಸ್‌ಟಿಇಸಿ ರಾಷ್ಟ್ರಗಳು ಪರಸ್ಪರ ಸಹಕಾರ ಉತ್ತೇಜನಕ್ಕೆ ಈ ಸಭೆಯಲ್ಲಿ ಹೆಚ್ಚಿನ ಆದ್ಯತೆ ನೀಡಿವೆ.
1997ರಲ್ಲಿ ಸ್ಥಾಪಿತವಾದ ಬಿಐಎಂಎಸ್‌ಟಿಇಸಿ, ಪರಸ್ಪರ ಸಹಕಾರಕ್ಕಾಗಿ ಬಂಗಾಳ ಕೊಲ್ಲಿಯ ದೇಶಗಳನ್ನು ಒಟ್ಟುಗೂಡಿಸುವ ಆರ್ಥಿಕ ಮತ್ತು ತಾಂತ್ರಿಕ ಉಪಕ್ರಮವಾಗಿದೆ.
ಇದಕ್ಕೂ ಮುನ್ನ ಜೈಶಂಕರ್ ಅವರು ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್-ಒ-ಚಾ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಶುಭಾಶಯಗಳನ್ನು ತಿಳಿಸಿದರು.