ಕಾಸರಗೋಡು: ಜಲ ಪ್ರಾಧಿಕಾರವನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸುವ ಮೂಲಕ ಪ್ರಾಧಿಕಾರವನ್ನು ವಿನಾಶದತ್ತ ಕೊಂಡೊಯ್ಯುವ ಸರ್ಕಾರದ ಕ್ರಮ ಖಂಡನೀಯ. ಈ ಪ್ರಯತ್ನವನ್ನು ಯಾವುದೇ ಬೆಲೆ ತೆತ್ತಾದರೂ ತಡೆಯುವುದಾಗಿ ಶಾಸಕ ಎನ್.ಎ.ನೆಲ್ಲಿಕುನ್ ತಿಳಿಸಿದ್ದಾರೆ.
ಅವರು ಕೇರಳ ವಾಟರ್ ಅಥಾರಿಟಿ ಸ್ಟಾಫ್ ಅಸೋಸಿಯೇಶನ್ ಐಎನ್‍ಟಿಯುಸಿ ನೇತೃತ್ವದಲ್ಲಿ ಕಾಸರಗೋಡಿನಿಂದ ಆರಂಭಗೊಂಡ ಮುಷ್ಕರಜಾಲದ ರಾಜ್ಯಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸರ್ಕಾರದಿಂದ ನೀಡಬೇಕಾದ ಯೋಜನೇತರ ಅನುದಾನವನ್ನು ನೀಡದೆ ಸಂಸ್ಥೆಯ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಸಂಸ್ಥೆಗೆ ಎಡಿಬಿ ಸಾಲದ ಮೂಲಕ ಹಣಕಾಸು ಒದಗಿಸುವ ಮೂಲಕ ಸರ್ಕಾರ ಒಂದೆಡೆ ಪ್ರಾಧಿಕಾರವನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಸರ್ಕಾರದ ಈ ಧೋರಣೆಯನ್ನು ಪ್ರಬಲವಗಿ ವಿರೋಧಿಸುವುದಾಗಿ ತಿಳಿಸಿದರು.
ಐಎನ್‍ಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಬಿಜು ಅವರಿಗೆ ಮುಷ್ಕರ ಜಾಲದ ಧ್ವಜವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಹಸ್ತಾಂತರಿಸಿದರು. ಸಿಬ್ಬಂದಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಟಿ.ಎಸ್.ಶೈನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಬಿಜು ಪ್ರಧಾನ ಭಾಷಣ ಮಾಡಿದರು. ರಾಜ್ಯ ಖಜಾಂಚಿ ಬಿ.ರಾಗೇಶ ಸಮರ ವಿವರಣೆ ನೀಡಿದರು. ರಾಜ್ಯ ಉಪಾಧ್ಯಕ್ಷರಾದ ವಿನೋದ್ ಎರವಿಲ್, ಪಿ.ಪ್ರಮೋದ್, ಟಿ.ಪಿ.ಸಂಜಯ್, ಕೆ.ಆರ್.ದಾಸ್, ರಾಜ್ಯ ಕಾರ್ಯದರ್ಶಿಗಳಾದ ವಿ.ವಿನೋದ್, ಎ.ವಿ.ಜಾರ್ಜ್, ಟಿ.ಎಸ್.ಶೈಜು, ಕೆ.ವಿ.ವೇಣುಗೋಪಾಲನ್ ಮುಂತಾದವರು ಉಪಸ್ಥೀತರಿದ್ದರು. ವಿವಿಧ ಜಿಲ್ಲೆಗಳಲ್ಲಿ ಹಾದು ಹೋಗುವ ಪ್ರತಿಭಟನಾ ಜಾಥಾ ಆಗಸ್ಟ್ 8 ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.